ದ.ಕ.ಜಿಲ್ಲೆಯಲ್ಲಿ ಬೀಸಿದ ಭಾರೀ ಬಿರುಗಾಳಿ

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಬಲವಾದ ಬಿರುಗಾಳಿ ಬೀಸಿದ್ದು, ಜನರನ್ನು ಕೆಲಕಾಲ ಆತಂಕಕ್ಕೀಡು ಮಾಡಿತ್ತು.
ಬಿರುಗಾಳಿಯ ಬಿರುಸಿಗೆ ನಗರ ಮತ್ತು ಹೊರವಲಯದ ಕೆಲವು ಕಡೆಗಳಲ್ಲಿ ಮರ, ಮರದ ಕೊಂಬೆಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಹಾಗಾಗಿ ಆಗಾಗ ವಿದ್ಯುತ್ ವ್ಯತ್ಯಯವೂ ಉಂಟಾಗಿತ್ತು.
*ನಗರದ ಮಲ್ಲಿಕಟ್ಟೆಯಲ್ಲಿ ಶುಕ್ರವಾರ ರಾತ್ರಿ ಹೋರ್ಡಿಂಗ್ ಉರುಳಿದ ಪರಿಣಾಮ ಪಾರ್ಕಿಂಗ್ ಮಾಡಲಾಗಿದ್ದ ಎರಡು ಕಾರಿಗೆ ಭಾರೀ ಹಾನಿಯಾಗಿದೆ.
*ಕರಾವಳಿಯಲ್ಲಿ ಶನಿವಾರ ಮುಂಜಾನೆಯವರೆಗೆ ಆರೆಂಜ್ ಅಲರ್ಟ್ ಮತ್ತು ಬಳಿಕ ನಾಲ್ಕು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಹುತೇಕ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿಯೂ ಗಂಟೆಗೆ ೪೦-೫೦ ಕಿ,ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
*ಗುರುವಾರ ಬೆಳಗ್ಗಿನಿಂದ ಶುಕ್ರವಾರ ಬೆಳಗ್ಗಿನವರೆಗೆ ಬೆಳ್ತಂಗಡಿ ೬೯.೮ ಮಿ.ಮೀ., ಬಂಟ್ವಾಳ ೧೩.೧, ಮಂಗಳೂರು ೧೪.೯, ಪುತ್ತೂರು ೧೯.೮, ಸುಳ್ಯ ೩೫.೯, ಮೂಡುಬಿದಿರೆ ೩೪.೧ ಮತ್ತು ಕಡಬದಲ್ಲಿ ೩೨.೮ ಮಿ.ಮೀ. ಸಹಿತ ಸರಾಸರಿ ೪೪ ಮಿ.ಮೀ. ಮಳೆಯಾಗಿದೆ.
ಮಳೆ ಹಾನಿ: ದ.ಕ ಜಿಲ್ಲೆಯಲ್ಲಿ ಶುಕ್ರವಾರ 2 ಮನೆಗಳು ಸಂಪೂರ್ಣ ಮತ್ತು 14 ಮನೆಗಳು ಭಾಗಶಃ ಹಾನಿಗೀಡಾಗಿವೆ. ಒಟ್ಟಾರೆ ಈವರೆಗೆ 82 ಮನೆಗಳು ಸಂಪೂರ್ಣ ಮತ್ತು 495 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಮೂಡುಬಿದಿರೆಯ ೨.೩೪ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಹಾನಿಗೀಡಾಗಿವೆ. ಮೆಸ್ಕಾಂಗೆ ಸಂಬಂಧಿಸಿದಂತೆ ೧೯೬ ವಿದ್ಯುತ್ ಕಂಬಗಳು, ೩ ಟ್ರಾನ್ಸ್ ಫಾರ್ಮರ್, ೯.೪೪ ಕಿ.ಮೀ. ವಿದ್ಯುತ್ ತಂತಿಗಳು ಹಾನಿಗೀಡಾಗಿವೆ. ಇದರೊಂದಿಗೆ ೩,೩೬೮ ವಿದ್ಯುತ್ ಕಂಬಗಳು ಮತ್ತು ೨೩೧ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಅಲ್ಲದೆ ೩.೦೬ ಕಿ.ಮೀ. ಜಿಲ್ಲಾ ಮುಖ್ಯರಸ್ತೆಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.