VIDEO- ಎಸ್ಟಿ ಜನಾಂಗಗಕ್ಕೆ ಸೇರಿಸಲು ಹೂಗಾರ ಸಮಾಜ ಆಗ್ರಹ; ಫ್ರೀಡಂ ಪಾರ್ಕ್ ಮೈದಾನದಲ್ಲಿ ಧರಣಿ

ಬೆಂಗಳೂರು, ಜು.15: ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಹೂಗಾರ ಸಮಾಜವನ್ನು ಎಸ್ಟಿ ಸಮುದಾಯಕ್ಕೆ ಸೇರ್ಪಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು.
ಶುಕ್ರವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಹೂಗಾರ ಸಮಾಜ ನೇತೃತ್ವದಲ್ಲಿ ಜಮಾಯಿಸಿದ ಸಮಾಜದ ಮುಖಂಡರು, ಸದಸ್ಯರು, ಹೂಗಾರ ಸಮಾಜ ರಾಜ್ಯದಲ್ಲಿ 10 ಲಕ್ಷ ಜನಸಂಖ್ಯೆ ಹೊಂದಿದ್ದು, ಇಲ್ಲಿಯವರೆಗೆ ಯಾವುದೇ ಮೀಸಲಾತಿ ಸಮಾಜಕ್ಕೆ ದೊರೆತಿಲ್ಲ ಎಂದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಕಲ್ಯಾಣ ಕರ್ನಾಟಕ ಹೂಗಾರ ಸಮಾಜದ ಅಧ್ಯಕ್ಷ ಬಸವರಾಜ ಹೂಗಾರ, ಶರಣ ಹೂಗಾರ ಮಾದಯ್ಯ ಅವರ ಅಭಿವೃದ್ದಿ ನಿಗಮ ಮಂಡಳಿ ಸ್ಥಾಪಿಸಬೇಕು. ಪ್ರತಿ ಜಿಲ್ಲೆಗೊಂದು ಹೂಗಾರ ಸಮುದಾಯ ಭವನವನ್ನು ನಿರ್ಮಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುರುಕುಲ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಎಲ್ಲಾ ಸರಕಾರಿ ಬಸ್ ನಿಲ್ದಾಣಗಳಲ್ಲಿ ಹೂಗಾರರಿಗೆ ಒಂದು ಮಳಿಗೆ ಮೀಸಲಿಡಬೇಕು ತಸ್ತಿಕ್ ಭತ್ತೆಯನ್ನು ಹೆಚ್ಚಿಸಿ ಸರಿಯಾದ ಸಮಯಕ್ಕೆ ನೀಡಬೇಕು. ರಾಜ್ಯದ ಹೂಗಾರರಿಗೆ ಹೂ ಬೆಳೆಯುವುದಕ್ಕೆ ಆರ್ಥಿಕ ನೆರವು ಒಗಗಿಸಬೇಕು. ಪ್ರತಿ ವರ್ಷ ಹೂಗಾರ ಮಾದಯ್ಯನವರ ಜಯಂತಿಯನ್ನು ಎಲ್ಲ ಸರಕಾರಿ ಕಚೇರಿಯಲ್ಲಿ ಆಚರಿಸಬೇಕು. ಹೂಗಾರ ಸಮಾಜದ ಗುರುಪೀಠಕ್ಕೆ 10 ಎಕರೆ ಜಮೀನು ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಬಜೆಟ್ ನಲ್ಲಿ ಹೂಗಾರ ಸಮಾಜಕ್ಕೆ 100 ಕೋಟಿ ಅನುದಾನ ಮೀಸಲಿಡಬೇಕು. ಹೂಗಾರ ಸಮಾಜದವರು ಭೂಮಿ ಸಾಗುವಳಿ ಮಾಡುವ ಭೂಮಿಯು ದೇವರ ಹೆಸರ ಮೇಲೆ ಇರುವುದನ್ನು ಸಾಗುವಳಿದಾರರ ಹೆಸರಿಗೆ ವರ್ಗಾಯಿಸಬೇಕು. ಹೂ ಸರಬರಾಜಿಗೆ ಸರಕಾರಿ ಬಸ್‍ಗಳಲ್ಲಿ ಉಚಿತವಾಗಿ ಸಾಗಾಣಿಕೆ ವ್ಯವಸ್ಥೆಯನ್ನು ಮಾಡಿಕೊಡಬೇಕು. ಹೂಗಾರ ಸಮುದಾಯವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದ ಕಾರಣ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.







