ಗೋವಾ: ಹುಟ್ಟುಹಬ್ಬ ಆಚರಿಸುತ್ತಿದ್ದ ವ್ಯಕ್ತಿಯ ಥಳಿಸಿ ಹತ್ಯೆ

ಪಣಜಿ, ಜು. 15: ವ್ಯಕ್ತಿಯೋರ್ವನನ್ನು ಆತನ ಜನ್ಮ ದಿನಾಚರಣೆಯಂದೇ ಥಳಿಸಿ ಹತ್ಯೆಗೈದ ಘಟನೆ ದಕ್ಷಿಣ ಗೋವಾದ ಮರ್ಗಾಂವ್ ಪಟ್ಟಣ ಸಮೀಪದ ಕೊಳಗೇರಿಯೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನ್ಮ ದಿನಾಚರಣೆಯ ಕಾರ್ಯಕ್ರಮಕ್ಕೆ ಆಹ್ವಾನ ಇಲ್ಲದೆ ಆಗಮಿಸಿರುವುದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಐವರು ವ್ಯಕ್ತಿಗಳ ಗುಂಪು ಆತನನ್ನು ಥಳಿಸಿ ಹತ್ಯೆಗೈದಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಬುಧವಾರ ತಡ ರಾತ್ರಿ ನಡೆದಿದೆ. ಹತ್ಯೆಯಾದ ವ್ಯಕ್ತಿಯನ್ನು ಮುಖ್ತರ್ ಬಡ್ನಿ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ‘‘ಮುಖ್ತಾರ್ ಅವರು ತನ್ನ 22ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು. ಈ ಸಂದರ್ಭ ಐವರು ಆಹ್ವಾನ ಇಲ್ಲದೇ ಆಗಮಿಸಿದ್ದರು. ಈ ಬಗ್ಗೆ ಮುಖ್ತಾರ್ ಅವರು ಪ್ರಶ್ನಿಸಿದ್ದರು. ಈ ಸಂದರ್ಭ ಅವರು ದೊಣ್ಣೆ ಹಾಗೂ ಇತರ ಆಯುಧಗಳಿಂದ ಮುಖ್ತಾರ್ ಮೇಲೆ ಹಲ್ಲೆ ನಡೆಸಿದ್ದರು’’ ಎಂದು ಪೊಲೀಸ್ ಅಧೀಕ್ಷಕ (ದಕ್ಷಿಣ) ಅಭಿಷೇಕ್ ಧಾನಿಯಾ ಅವರು ಹೇಳಿದ್ದಾರೆ.
ದಾಳಿಯಿಂದ ಗಂಭೀರ ಗಾಯಗೊಂಡ ಮುಖ್ತಾರ್ ಅವರನ್ನು ಕೂಡಲೇ ದಕ್ಷಿಣ ಗೋವಾ ಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ.





