ವೀಡಿಯೊ ಚಿತ್ರೀಕರಣ ನಿಷೇಧ ಹಿಂಪಡೆದ ರಾಜ್ಯ ಸರಕಾರದ ಆದೇಶದಲ್ಲಿ ತಪ್ಪುಗಳ ಸರಮಾಲೆ: ಕನ್ನಡದ ಕಗ್ಗೊಲೆ ಎಂದ ಜನತೆ!

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವೀಡಿಯೊಗೆ ನಿರ್ಬಂಧ ವಿಧಿಸಿದ್ದ ಆದೇಶವನ್ನು ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ. ರಾಜ್ಯ ಸರ್ಕಾರ ಜುಲೈ 15ರ ತಡರಾತ್ರಿ ಹಿಂಪಡೆದ ಆದೇಶ ಪತ್ರದಲ್ಲಿ ಕನ್ನಡ ಪದಗಳನ್ನು ಅನೇಕ ಕಡೆ ತಪ್ಪಾಗಿ ಬರೆಯಲಾಗಿದೆ. ಈಗ ಈ ಆದೇಶ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದೇಶದ ಪತ್ರದಲ್ಲಿ ಆರಂಭದಿಂದ ಕೊನೆಯವರಿಗೆ ಅನೇಕ ತಪ್ಪುಗಳಿವೆ. ಆದೇಶ ಪತ್ರದಲ್ಲಿ ನಡಾವಳಿಗಳು ಎಂಬ ಪದ 'ನಡವಳಿಗಳು' ಎಂದು ಬರೆದಿದ್ದು, ಪ್ರಸ್ತಾವನೆಯನ್ನು 'ಪ್ರಸತ್ತಾವನೆ' ಎಂದು ಬರೆಯಲಾಗಿದೆ. ಕರ್ನಾಟಕವನ್ನು 'ಕರ್ನಾಟಾ' ಎಂದು ಬರೆಯಲಾಗಿದೆ. ಆಡಳಿತ ಪದವನ್ನು 'ಆಡಳಿದ' ಎಂದು, ಭಾಗ–1 ಅನ್ನು 'ಬಾಗ–1' ಬರೆದಿದ್ದು, ಸದ್ಯ ಅನೇಕ ಅಕ್ಷರ ದೋಷವಿರುವ ಆದೇಶ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸರ್ಕಾರದಿಂದ ಕನ್ನಡದ ಕಗ್ಗೊಲೆ, ಅಧಿಕಾರಿಗಳು ನಿದ್ದೆಗಣ್ಣಿನಿಂದ ಮರು ಆದೇಶ ಹೊರಡಿಸಿದ್ದಾರೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಕಾರ್ಯನಿರ್ವಹಣೆ ವೇಳೆಯಲ್ಲಿ ಸಾರ್ವಜನಿಕರು ಅನುಮತಿ ಇಲ್ಲದೆ ಫೋಟೊ ತೆಗೆಯುವುದು ಮತ್ತು ವೀಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶುಕ್ರವಾರ ಆದೇಶ ಹೊರಡಿಸಿತ್ತು.
‘ಶೇ 40ರ ಲಂಚದ ಆಪಾದನೆಗೆ ಗುರಿಯಾಗಿದ್ದ ಸರ್ಕಾರ, ಭ್ರಷ್ಟಾಚಾರ ಅನಿರ್ಬಂಧಿತವಾಗಿ ನಡೆಯಲು ಅನುಕೂಲ ಮಾಡಿಕೊಡುವುದಕ್ಕಾಗಿ ಈ ನಿಷೇಧ ಹೇರಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸಚಿವಾಲಯದ ಕಚೇರಿಗಳನ್ನು ಬಿಟ್ಟು ಉಳಿದೆಲ್ಲ ಕಚೇರಿಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು. ಕಚೇರಿಯ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಕೊಠಡಿಗಳ ಚಲನವಲನಗಳನ್ನು ವೀಕ್ಷಿಸಲು ಕೇಂದ್ರೀಕೃತ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅದನ್ನು ಇನ್ನಷ್ಟು ಸುಧಾರಣೆ ಮಾಡಬೇಕು ಎಂಬ ಆಗ್ರಹ ಇರುವಾಗಲೇ, ಫೋಟೊ, ವಿಡಿಯೊ ಚಿತ್ರೀಕರಣನ್ನೂ ನಿಷೇಧ ಹೇರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.







