ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ; ಡಿವೈಡರ್ ಮೇಲೆ ಚಲಿಸಿದ ಬಸ್!

ಕುಂದಾಪುರ: ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಅಲ್ಲಲ್ಲಿ ಹೊಂಡ-ಗುಂಡಿಗಳು ಸೃಷ್ಟಿಯಾಗಿವೆ. ಸುಮಾರು ಎರಡು ಅಡಿ ಹೊಂಡಕ್ಕೆ ಬಸ್ ಇಳಿದ ಪರಿಣಾಮ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು 300 ಮೀಟರ್ ದೂರ ಡಿವೈಡರ್ ಮೇಲೆ ಚಲಿಸಿದ ಘಟನೆ ತಾಲೂಕಿನ ಕುಂಭಾಸಿ ಸಮೀಪದ ಕೊರವಡಿ ಕ್ರಾಸ್ ಬಳಿ ಶನಿವಾರ ನಡೆದಿದೆ.
ಮುಂಬೈನಿಂದ ಮಂಗಳೂರಿನತ್ತ ಸಾಗುತ್ತಿದ್ದ ಆನಂದ್ ಹೆಸರಿನ ಖಾಸಗಿ ಬಸ್ ಕುಂಭಾಸಿ ಸಮೀಪದ ಕೊರವಡಿ ಕ್ರಾಸ್ ಬಳಿ ಹೆದ್ದಾರಿ ಹೊಂಡಕ್ಕೆ ಬಸ್ ಟಯರ್ ಇಳಿದಾಗ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಸುಮಾರು 300 ಮೀಟರ್ ದೂರ ಡಿವೈಡರ್ ಏರಿ ಸಾಗಿದ್ದು ಚಾಲಕನ ಜಾಗರುಕತೆಯಿಂದಾಗಿ ಪಲ್ಟಿಯಾಗುವುದು ತಪ್ಪಿದಂತಾಗಿದೆ. ಹೀಗೆ ಅಪಾಯದಲ್ಲಿ ಸಾಗಿದ ಬಸ್ ಕನ್ನುಕೆರೆ ಮಸೀದಿ ಎದುರು ಡಿವೈಡರ್ ಏರಿ ನಿಂತಿದೆ. ಬಸ್ಸಿನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.
ಪ್ರತಿವರ್ಷ ಮಳೆಗಾಲದಲ್ಲಿ ಈ ಭಾಗದ ಹೆದ್ದಾರಿಯ ಮೇಲೆ ಮಳೆ ನೀರು ನಿಂತು ಹೊಂಡ ನಿರ್ಮಾಣವಾಗುವುದರಿಂದ ಹಲವು ಅವಘಡಗಳು ಸಂಭವಿಸುತ್ತಲೇ ಇವೆ. ಆದರೂ ಕೂಡ ಸಂಬಂಧಪಟ್ಟವರು ಮಾತ್ರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ವಾಹನ ಸವಾರರು ಹಾಗೂ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರಾದ ಆದಿಲ್ ಗಫ್ಫಾರ್, ಫಾರುಖ್ ಬಾಷಾ, ಇಕ್ಬಾಲ್ ಅಹಮ್ಮದ್ ಅವರು ತಕ್ಷಣ ಪೊಲೀಸರಿಗೆ ಹಾಗೂ ಟೋಲ್ ಸಿಬ್ಬಂದಿಗೆ ಮಾಹಿತಿ ನೀಡಿ ತುರ್ತು ಕ್ರಮಕೈಗೊಳ್ಳಲು ನೆರವಾದರು. ಅಲ್ಲದೆ ಹೆದ್ದಾರಿ ಹೊಂಡ ಶೀಘ್ರ ಮುಚ್ಚಿ, ಮಳೆ ನೀರು ನಿಲ್ಲದಂತೆ ಶಾಶ್ವತ ಕ್ರಮಕೈಗೊಂಡು ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಬೇಕು ಎಂದು ಆದಿಲ್ ಗಫ್ಫಾರ್ ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ.






.jpeg)

.jpeg)


