ಕಲಬುರಗಿ; ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣ: ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ವಿಜಯ್ ಹಳ್ಳಿ
ಕಲಬುರಗಿ: ಜಿಲ್ಲೆಯ ಶಹಬಾದ್ ಪಟ್ಟಣದಲ್ಲಿ ಜುಲೈ11ರಂದು ಕಾಂಗ್ರೆಸ್ ಮುಖಂಡ ಗಿರೀಶ್ ಕಂಬಾನೂರ್ ಅವರನ್ನು ರೈಲ್ವೆ ನಿಲ್ದಾಣದ ಹತ್ತಿರ ಬರ್ಬರ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿದ್ದಾರೆ.
ಪೊಲೀಸರು ಶಹಬಾದ್ ಪಟ್ಟಣದ ಹೊರವಲಯದ ತೊನಸನಹಳ್ಳಿ ಬಳಿ ಕೊಲೆ ಆರೋಪಿ ವಿಜಯ್ ಹಳ್ಳಿ ಎಂಬಾತನನ್ನು ಕರೆದುಕೊಂಡು ಪಂಚನಾಮೆಗೆ ಹೋಗಿದ್ದ ವೇಳೆ ಆರೋಪಿ ಪಿಎಸ್ಐ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಪಿಎಸ್ಐ ಅವರು ವಿಜಯ್ ಹಳ್ಳಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಆರೋಪಿ ವಿಜಯ್ ಹಳ್ಳಿ ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ಇಟ್ಟಿದ್ದ ಸ್ಥಳಕ್ಕೆ ಇಂದು ಬೆಳಗ್ಗೆ ಆರೋಪಿ ವಿಜಯ್ ಹಳ್ಳಿಯನ್ನು ಕರೆದುಕೊಂಡು ಮಾರಕಾಸ್ತ್ರವನ್ನು ಜಪ್ತಿ ಮಾಡಿಕೊಳ್ಳಲು ಹೋಗಿದ್ದರು. ಈ ವೇಳೆ ಮಾರಕಾಸ್ತ್ರದಿಂದ ಶಹಬಾದ್ ಪಿಎಸ್ಐ ಸುವರ್ಣ ಅವರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭ ಚಿತ್ತಾಪುರ ಸಿಪಿಐ ಪ್ರಕಾಶ್ ಯಾತನೂರು ವಿಜಯ್ ಹಳ್ಳಿಯ ಬಲಗಾಲಿಗೆ ಎರಡು ಗುಂಡು ಹೊಡೆದು ಬಂಧಿಸಿದ್ದಾರೆ. ಸದ್ಯ ಆರೋಪಿ ವಿಜಯ್ ಹಳ್ಳಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡ ಪಿಎಸ್ಐ ಸುವರ್ಣ, ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಲಬುರಗಿ ಪೊಲೀಸ್ ವರಿಷ್ಠಧಿಕಾರಿ ಇಶಾಪಂತ್ ಅವರು ಗಾಯಗೊಂಡ ಪಿಎಸ್ಐ ಅವರ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದಿದ್ದಾರೆ.
ಬಂಧಿತ ಕೊಲೆ ಆರೋಪಿ ವಿಜಯ್ ಹಳ್ಳಿ ಮೇಲೆ ಎರಡು ಕೊಲೆ ಯತ್ನ, ಬೆದರಿಕೆ ಸೇರಿ ಆರು ಪ್ರಕರಣಗಳು ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







