ಅತಿವೃಷ್ಟಿ ಹಾನಿ ಪರಿಶೀಲನೆ ನಡೆಸಿದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್

ಚಿಕ್ಕಮಗಳೂರು: ಅತಿವೃಷ್ಟಿಯಿಂದ ನಷ್ಟಕ್ಕೆ ಒಳಗಾದವರಿಗೆ ಶೀಘ್ರ ಪರಿಹಾರ ನೀಡಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.
ಶನಿವಾರ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾಗಿದ್ದ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮ ಸೇರಿದಂತೆ ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮ ಹಾಗೂ ಕೊಟ್ಟಿಗೆರೆಹಾರ ಮತ್ತಿತರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರೇನೂರು ಗ್ರಾಮದ ರಾಮು ಎಂಬವರ ತೋಟದಲ್ಲಿ ಗುಡ್ಡಕುಸಿದು ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗಳು ನಷ್ಟವಾಗಿದೆ. ತೋಟದ ಮಾಲಕರು ತಮ್ಮ ನೋವನ್ನು ಹೇಳಿ ಕೊಂಡಿದ್ದಾರೆ. ಮಳೆಯಿಂದ ಹಾನಿಯಾಗಿರುವ ಬೆಳೆಗಳ ಸಮೀಕ್ಷೆ ನಡೆಸಿ ಶೀಘ್ರವೇ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.
ಮೂಡಿಗೆರೆ ಕ್ಷೇತ್ರವ್ಯಾಪ್ತಿಯಲ್ಲಿ ಮಳೆಯಿಂದ ಅನೇಕ ಮನೆಗಳಿಗೆ ಹಾನಿಯಾಗಿದೆ. ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿದ್ದೇನೆ. ರಾಜ್ಯ ಸರಕಾರ ಮಳೆಯಿಂದ ಸಂಕಷ್ಟಕ್ಕೊಳಗಾದವರಿಗೆ ಕೂಡಲೇ ನೆರವು ಕಲ್ಪಿಸುವ ನಿಟ್ಟಿನಲ್ಲಿ 500 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದ ಅವರು, ಮಳೆಯಿಂದ ಮನೆ ಕಳೆದುಕೊಂಡ ಪ್ರತೀ ಸಂತ್ರಸ್ಥ ಕುಟುಂಬಕ್ಕೆ 5ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಹೊಯ್ಸಳಲು ಗ್ರಾಮದಲ್ಲಿ ಸ್ಮಶಾನ ಇಲ್ಲದ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದು, ಜಾಗ ಗುರುತಿಸಿ ಸ್ಮಶಾನ ನಿರ್ಮಾಣ ಮಾಡಿಕೊಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಮನೆ, ರಸ್ತೆ, ಸೇತುವೆಗಳು ಹಾಳಾಗಿವೆ. ಹಾನಿಯನ್ನು ಪರಿಶೀಲಿಸಿ ಕ್ರಿಯಾ ಯೋಜನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಿದಲ್ಲಿ ಹೆಚ್ಚಿನ ಪರಿಹಾರವನ್ನು ಜಿಲ್ಲೆಗೆ ತರುವಲ್ಲಿ ಶ್ರಮಿಸುತ್ತೇನೆ ಎಂದ ಅವರು, ಮಳೆಯಿಂದ ಯಾವ ಯಾವ ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಸಮೀಕ್ಷೆ ನಡೆಸಿ ಮುಂದಿನ ದಿನಗಳಲ್ಲಿ ಪರಿಹಾರ ನೀಡಲಾಗುವುದು, ಗಾಳಿ, ಮಳೆಯಿಂದ ಮರಬಿದ್ದು ಮೃತಪಟ್ಟ ಮಹಿಳೆ ಕುಟುಂಬಕ್ಕೆ ಈಗಾಗಲೇ ಪರಿಹಾರವನ್ನು ಒದಗಿಸಲಾಗಿದೆ. ಹಳ್ಳದಲ್ಲಿ ಕೊಚ್ಚಿಹೋದ ಹೊಸಪೇಟೆ ಬಾಲಕಿ ಮನೆಗೆ ಭೇಟಿನೀಡಿ ಆ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ನೀಡಲಾಗುವುದು. ಮತ್ತೊರ್ವ ವ್ಯಕ್ತಿ ನಾಪತ್ತೆಯಾಗಿದ್ದು, ಅವರ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದರು.
ಹಾನಿ ಪರಿಶೀಲನೆ ವೇಳೆ ಸಚಿವ ಭೈರತಿಯೊಂದಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ಹಿರಿಯ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಹಾರದ ಚೆಕ್ ವಿತರಣೆ: ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮದಲ್ಲಿ ಮಳೆಯಿಂದ ಮನೆಕುಸಿದು ಬಿದ್ದ ಸ್ಥಳಕ್ಕೆ ಸಚಿವ ಭೈರತಿ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಮನೆ ಕಳೆದುಕೊಂಡ ಸೀತಮ್ಮ, ಸುರೇಶ್ ಹಾಗೂ ಕಾಂತಮಣಿ ಅವರಿಗೆ ಸಚಿವ ಭೈರತಿ ಬಸವರಾಜು ಅವರು ತಲಾ 95,100 ರೂ. ಪರಿಹಾರದ ಚೆಕ್ ವಿತರಿಸಿದರು. ಸಂಪೂರ್ಣ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಳ್ಳಲು ರಾಜ್ಯ ಸರಕಾರ 5 ಲಕ್ಷ ರೂ. ಹಣ ನೀಡಲಿದೆ. ಮೊದಲ ಹಂತದಲ್ಲಿ 95,100 ರೂ. ಪರಿಹಾರವನ್ನು ಒದಗಿಸಲಾಗುತ್ತಿದೆ. ನಂತರ 3 ಕಂತುಗಳಲ್ಲಿ ಹಣ ಬಿಡುಗಡೆಯಾಗಲಿದೆ. ಈ ಹಣದಲ್ಲಿ ಸಂತ್ರಸ್ಥರು ಸುಸಜ್ಜಿತವಾದ ಮನೆ ನಿರ್ಮಿಸಿಕೊಳ್ಳಬೇಕೆಂದು ಕರೆ ನೀಡಿದರು.






.jpg)
.jpg)

