ಉಡುಪಿ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರೀ ಮಳೆ
ಉಡುಪಿ : ಜಿಲ್ಲೆಯ ಉಡುಪಿ, ಬ್ರಹ್ಮಾವರ, ಕಾಪು ಹಾಗೂ ಕಾರ್ಕಳ ತಾಲೂಕುಗಳಲ್ಲಿ ಮಳೆಯ ಬಿರುಸು ಹಾಗೂ ಪ್ರಮಾಣ ಕಡಿಮೆಯಾಗಿದ್ದರೂ, ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಬೈಂದೂರು, ಕುಂದಾಪುರ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.
ಇಂದು ಬೆಳಗ್ಗೆ ೮:೩೦ಕ್ಕೆ ಮುಕ್ತಾಯಗೊಂಡಂತೆ ಹಿಂದಿನ ೨೪ ಗಂಟೆಗಳಲ್ಲಿ ಜಿಲ್ಲೆಯ ಬೈಂದೂರಿನಲ್ಲಿ ೧೪೩.೪ಮಿ.ಮೀ, ಕುಂದಾಪುರದಲ್ಲಿ ೧೧೯.೯ಮಿ.ಮೀ. ಹಾಗೂ ಹೆಬ್ರಿಯಲ್ಲಿ ೧೦೫.೧ಮಿ.ಮೀ. ಮಳೆಯಾಗಿದೆ. ಇದಕ್ಕೆ ಹೋಲಿಸಿದರೆ ಉಳಿದ ಮೂರು ತಾಲೂಕುಗಳಲ್ಲಿ ಅರ್ಧದಷ್ಟು ಮಾತ್ರ ಮಳೆಯಾಗಿದೆ.
ಇಂದು ದಿನವಿಡೀ ಜಿಲ್ಲೆಯಲ್ಲಿ ಒಳ್ಳೆಯ ಮಳೆಯಾಗಿದೆ. ಸತತವಾಗಿ ಮಳೆ ಬೀಳದಿದ್ದರೂ, ಬಿಟ್ಟು ಬಿಟ್ಟು ಜೋರಾಗಿಯೂ ಮಳೆ ಸುರಿಯುತ್ತಿದೆ. ಅಲ್ಲದೇ ದಿನವಿಡೀ ಮೋಡ ಕವಿದ ತಂಪು ವಾತಾವರಣ ಜಿಲ್ಲೆಯಾದ್ಯಂತ ಕಂಡುಬಂದಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಎರಡು-ಮೂರು ದಿನ ಇದೇ ವಾತಾವರಣ ಮುಂದುವರಿಯಲಿದೆ.
೧೬ ಪ್ರಕರಣ ೭ಲಕ್ಷ ರೂ.ನಷ್ಟ: ಜಿಲ್ಲೆಯಲ್ಲಿ ಇಂದು ಸಹ ಗಾಳಿ-ಮಳೆಯಿಂದ ಉಂಟಾದ ೧೬ ಹಾನಿಯ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸುಮಾರು ಏಳು ಲಕ್ಷ ರೂ.ಗಳಷ್ಟು ನಷ್ಟ ಉಂಟಾಗಿರುವ ಅಂದಾಜು ಮಾಡಲಾಗಿದೆ. ಬೈಂದೂರಿನಲ್ಲಿ ಮೂರು ಲಕ್ಷ, ಹೆಬ್ರಿಯಲ್ಲಿ ೧.೮೨ ಲಕ್ಷ ರೂ., ಕಾರ್ಕಳದಲ್ಲಿ ೯೩ ಸಾವಿರ ಹಾಗೂ ಬ್ರಹ್ಮಾವರದಲ್ಲಿ ೮೭ಸಾವಿರ ರೂ.ನಷ್ಟವಾದ ಬಗ್ಗೆ ವರದಿಗಳು ಜಿಲ್ಲಾ ನಿಯಂತ್ರಣ ಕಚೇರಿಗೆ ತಲುಪಿವೆ.
ಬೈಂದೂರು ತಾಲೂಕು ಯಡ್ತರೆ ಗ್ರಾಮದ ದೇವಿ ಎಂಬವರ ಮನೆ ಮಳೆಯಿಂದ ಭಾಗಶ: ಹಾನಿಗೊಂಡಿದ್ದು ೯೦ ಸಾವಿರ, ನಾರಾಯಣ ಎಂಬವರ ಮನೆಗೆ ೮೦ ಸಾವಿರ, ಮರವಂತೆಯ ನಾಗಪ್ಪಯ್ಯ ಎಂಬವರ ಮನೆಗೆ ೮೦ಸಾವಿರ ಹಾಗೂ ಬೈಂದೂರಿನ ನರಸಿಂಹ ಶೇರಿಗಾರ್ ಎಂಬವರ ಮನೆಗೆ ೫೦ ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಅಲ್ಲದೇ ಕಿರಿಮಂಜೇಶ್ವರ ಗ್ರಾಮದ ಕಿರಿಮಂಜೇಶ್ವರ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆಯ ಮೇಲೆ ಮರದ ಗೆಲ್ಲು ಬಿದ್ದು ಭಾಗಶ: ಕುಸಿದಿದ್ದು ೪೦,೦೦೦ ರೂ. ನಷ್ಟವಾಗಿರುವ ಬಗ್ಗೆ ಅಂದಾಜು ಮಾಡಲಾಗಿದೆ.
ಹೆಬ್ರಿ ತಾಲೂಕು ಬೇಳಂಜೆಯ ರಾಧ ಪೂಜಾರ್ತಿ ಎಂಬವರ ಮನೆ ಮಳೆಯಿಂದ ಭಾಗಶ: ಹಾನಿಯಾಗಿದ್ದು, ಒಂದು ಲಕ್ಷ ರೂ.ಗಳಷ್ಟು ನಷ್ಟವಾಗಿದೆ. ಇನ್ನು ಅಂಡಾರಿನ ಶೀನ ನಾಯ್ಕ ಎಂಬವರ ಮನೆ ಮೇಲೆ ದೊಡ್ಡಿ ಮರ ಬಿದ್ದು ೫೦ ಸಾವಿರ ರೂ., ಪಡುಕುದ್ರು ರಾಮಣ್ಣ ಪೂಜಾರಿ ಮನೆಗೆ ೨೦ ಸಾವಿರ ಹಾಗೂ ಶಿವಪುರದ ರಾಜು ಎಂಬವರ ಮನೆಗೆ ೧೨ ಸಾವಿರ ರೂ.ನಷ್ಟ ಉಂಟಾಗಿದೆ.
ಬ್ರಹ್ಮಾವರ ತಾಲೂಕು ಹಾರಾಡಿಯ ಗಂಗೆ ಪೂಜಾರ್ತಿ ಮನೆ ಮೇಲೆ ಮರ ಬಿದ್ದು ೫೦ ಸಾವಿರ, ಕಚ್ಚೂರು ಗಣಪತಿ ನಾಯಕ್ ಮನೆ ಮೇಲೆ ಮರಬಿದ್ದು ೫೦ ಸಾವಿರ ರೂ., ಕಾರ್ಕಳದ ನಿಂಜೂರಿನ ರತ್ನಾವತಿ ಆಚಾರ್ತಿ, ನೀರೆಯ ಬೊಗ್ಗು ಪರವ, ಮಾಳದ ಓಮನ್ ಹಾಗೂ ಮುಂಡ್ಕೂರಿನ ಬೇಬಿ ಎಂಬವರ ಮನೆಗೆ ಗಾಳಿ-ಮಳೆಯಿಂದ ಹಾನಿಯಾಗಿದ್ದು ೯೫ ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.