ಉಡುಪಿ; ಏಕ ಬಳಕೆ ಪ್ಲಾಸ್ಟಿಕ್ ನಿಷೇಧ: ತಪ್ಪಿದಲ್ಲಿ 20 ಸಾವಿರ ರೂ.ವರೆಗೆ ದಂಡ
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ

ಉಡುಪಿ: ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕಾನೂನು ಉಲ್ಲಂಘಿಸುವ ಉತ್ಪಾದಕರು, ವಿತರಕರು, ವ್ಯಾಪಾರಿಗಳಿಗೆ ಮೊದಲು ೫ ಸಾವಿರ, ಎರಡನೇ ಬಾರಿಗೆ 10 ಸಾವಿರ ರೂ., ಮೂರನೆ ಬಾರಿಗೆ 20 ಸಾವಿರ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.
ಕೇಂದ್ರ ಸರಕಾರ ಜಾರಿಗೆ ತಂದಿರುವ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಶನಿವಾರ ನಡೆದ ‘ಘನ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ಮರು ಬಳಕೆ ಮಾಡುವ ಪ್ಲಾಸ್ಟಿಕ್ ೫೧ ಮೈಕ್ರೊ ಗೇಜ್‌ಗಿಂತ ಕಡಿಮೆ ಇರ ಬಾರದು. ಅದರಲ್ಲಿ ಸ್ಪಷ್ಟವಾಗಿ ಉತ್ಪಾದಕರ ವಿವರ, ಲೈಸೆನ್ಸ್ ನಂಬರ್ ಇರಬೇಕು. ಇಂಥ ಕವರ್‌ನಲ್ಲಿ ಆಹಾರ ಉತ್ಪನ್ನಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡಬಹುದು. ಇದನ್ನು ನಕಲಿ ಮಾರ್ಗದಲ್ಲಿ ಬಳಸಿಕೊಂಡಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕೆಲವು ವ್ಯಾಪಾರಿ, ಹೊಟೇಲ್ ಮಾಲಕರು ಮಾತ್ರ ಪ್ರಮಾಣಿಕವಾಗಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದ್ದರೆ ಉಳಿದ ಕೆಲವರು ಇನ್ನೂ ಬಳಕೆ ಮಾಡುತ್ತಿದ್ದಾರೆ. ಈ ಹಿಂದೆ ಬೇರೆ ರಾಜ್ಯದ ಗಡಿ ಭಾಗದಿಂದ ಪ್ಲಾಸ್ಟಿಕ್ ಉತ್ಪನ್ನಗಳು ಅಕ್ರಮವಾಗಿ ಮಾರುಕಟ್ಟೆಗೆ ಬರುತ್ತಿದ್ದವು. ಈಗ ಕೇಂದ್ರ ಸರಕಾರವೇ ದೇಶದಾದ್ಯಂತ ನಿಷೇಧ ಮಾಡಿರುವುದರಿಂದ ಹಂತಹಂತವಾಗಿ ಮೂಲದಲ್ಲೆ ನಿಯಂತ್ರಣವಾಗುವ ಕೆಲಸವಾಗುತ್ತದೆ ಎಂದು ಪರಿಸರ ಅಧಿಕಾರಿ ಲಕ್ಷ್ಮೀಕಾಂತ್ ಹೇಳಿದರು.
ಪ್ಲಾಸ್ಟಿಕ್ ಕಡಿವಾಣ ಅಗತ್ಯ: ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ರಘುಪತಿ ಭಟ್, ಕೇಂದ್ರ, ರಾಜ್ಯ ಸರಕಾರದ ಕಾನೂನುಗಳ ಹೊರತಾಗಿಯೂ ಪ್ಲಾಸ್ಟಿಕ್ ನಿಂದ ಪರಿಸರದ ಮೇಲಾಗುತ್ತಿರುವ ತೊಂದರೆ ಬಗ್ಗೆ ಜಾಗೃತಿಯಾಗಬೇಕಾಗಿದೆ. ಕರ್ವಾಲುನಲ್ಲಿ ರುವ ತ್ಯಾಜ್ಯ ಘಟಕದಲ್ಲಿ ೧೦ ವರ್ಷಗಳ ಪ್ಲಾಸ್ಟಿಕ್ ತ್ಯಾಜ್ಯವನ್ನು ನಮಗೆ ಇನ್ನೂ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇಡೀ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದರೆ ಆತಂಕ ಉಂಟಾಗುತ್ತದೆ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳು ಸಂಕಷ್ಟದಿಂದ ಕೂಡಿರಲಿದೆ ಎಂದರು.
ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ನಗರಸಭೆ ಅಧಿಕಾರಿಗಳಿಗೆ ವ್ಯಾಪಾರಸ್ಥರು, ಹೊಟೇಲ್ ಮಾಲಕರು ಪರಿಶೀಲನೆ ನಡೆಸಲು ಅವಕಾಶ ಮಾಡಿಕೊಡಬೇಕು. ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಪ್ಲಾಸ್ಟಿಕ್ ನಿಷೇಧ ಹೆಸರಲ್ಲಿ ಯಾವುದೇ ಕಾರಣಕ್ಕೂ ಸರಕಾರ, ನಗರಸಭೆ ಆಡಳಿತ ವರ್ತಕರ ಮೇಲೆ ದಬ್ಬಾಳಿಕೆ ನಡೆಸುವುದಿಲ್ಲ ಎಂದು ಭರವಸೆ ನೀಡಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಡಿ.ಶೆಟ್ಟಿ, ಹೊಟೇಲ್ ಮಾಲಕರು, ವರ್ತಕರು, ಬಾರ್ ಮತ್ತು ರೆಸ್ಟೋರೆಂಟ್ ಮಾಲಕರು, ಕಲ್ಯಾಣ ಮಂಟಪದ ಮಾಲಕರು, ಬೀದಿಬದಿ ವ್ಯಾಪಾರಿ ಸಂಘಗಳ ಸದಸ್ಯರು ಹಾಗೂ ಕೈಗಾರಿಕೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ನಿಷೇಧಿತ ಪ್ಲಾಸ್ಟಿಕ್‌ಗಳು!
ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಪಟ್ಟಿಯಲ್ಲಿರುವ ಬಗ್ಗೆ ವಿವರಣೆ ನೀಡಿದ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್, ಅದಕ್ಕೆ ಪರ್ಯಾಯವಾಗಿ ಯಾವುದದನ್ನು ಬಳಕೆ ಮಾಡಬಹುದು ಎಂಬುದನ್ನು ತಿಳಿಸಿದರು.
ಪ್ಲಾಸ್ಟಿಕ್ ಬ್ಯಾಗ್ಸ್, ನಾನ್ ವೊವೆಲಿನ್ ಪಾಲಿ ಪ್ರೊಪೈಲಿನ್ ಚೀಲಗಳು, ಪ್ಲಾಸ್ಟಿಕ್ ಫ್ಲ್ಯಾಗ್ಸ್, ಭಿತ್ತಿ ಪತ್ರ ಫ್ಲೆಕ್ಸ್, ತೋರಣ, ತಟ್ಟೆಗಳು, ಥರ್ಮಕೋಲ್ (ಪಾಲಿ ಸ್ಟಿರಿನ್) ತಟ್ಟೆಗಳು, ಪ್ಲಾಸ್ಟಿಕ್ ಚಮಚ, ಲೋಟ, ಥರ್ಮೊಕಾಲ್ ಲೋಟ, ತರಕಾರಿ ಹಾಕುವ ಪ್ಲಾಸ್ಟಿಕ್ ಚೀಲ, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾ, ತರಕಾರಿ, ಹಣ್ಣು, ಗಿಫ್ಟ್ ವಸ್ತುಗಳು, ಮಾಂಸ, ಮೀನಿಗೆ ಸುತ್ತುವ ಪ್ಲಾಸ್ಟಿಕ್ ರ್ಯಾಪ್ಸ್‌ಗಳನ್ನು ಸಂಪೂರ್ಣ ನಿಷೇಧವಿದೆ ಎಂದು ಲಕ್ಷ್ಮೀಕಾಂತ್ ಮಾಹಿತಿ ನೀಡಿದರು.