ದ.ಕ.ಜಿಲ್ಲಾ ಯುವ ರೈತ ಸಂಘಕ್ಕೆ ಚಾಲನೆ
ಮಂಗಳೂರು: ಕರ್ನಾಟಕ ರಾಜ್ಯ ರೈತ ಸಂಘದ ದ.ಕ. ಜಿಲ್ಲಾ ಘಟಕದ ಆಶ್ರಯದಲ್ಲಿ ಜಿಲ್ಲಾ ಯುವ ರೈತ ಘಟಕಕ್ಕೆ ಶನಿವಾರ ನಗರದ ಕದ್ರಿ ಪಾರ್ಕ್‌ನ ಬಾಲಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಜಾತಿ, ಮತ, ಧರ್ಮ ಎಂಬ ಭೇದವಿಲ್ಲದೆ ಎಲ್ಲರನ್ನೂ ಒಳಗೊಂಡಿರುವ ಕ್ಷೇತ್ರ ಕೃಷಿಯಾಗಿದೆ. ಹಾಗಾಗಿ ಎಲ್ಲ ಧರ್ಮಕ್ಕಿಂತ ಶ್ರೇಷ್ಠ ರೈತ ಧರ್ಮವಾಗಿದೆ ಎಂದು ಹೇಳಿದರು.
ಯುವ ಜನರು ರೈತ ಚಳವಳಿಯ ನೇತೃತ್ವ ವಹಿಸಿಕೊಳ್ಳಬೇಕಾಗಿದೆ. ಅದಕ್ಕೂ ಮುನ್ನ ದೇಶದ ಇತಿಹಾಸ, ಚಳವಳಿಯ ಹಿನ್ನೆಲೆಯ ಬಗ್ಗೆ ಸ್ಪಷ್ಟತೆ ಇರಬೇಕು. ವೈಚಾರಿಕ ಗಟ್ಟಿತನ ಇದ್ದಾಗ ಮಾತ್ರ ಚಳವಳಿಗೆ ಭದ್ರ ಬುನಾದಿ ಸಿಗಲು ಸಾಧ್ಯ ಎಂದು ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟರು.
ರೈತ ಚಳವಳಿ ಕೃಷಿಕರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟಿದೆ. ಆಡಳಿತ ವರ್ಗದ ನೀತಿಯಿಂದಾಗಿ ರೈತರಿಗೆ ಅನ್ಯಾಯ ಆಗುತ್ತಿದೆ. ಗಡಿ ಕಾಯುವುದು ಮಾತ್ರ ದೇಶದ ಭದ್ರತೆಯಲ್ಲ, ಯುವ ಜನರಿಗೆ ಉದ್ಯೋಗ ಸೃಷ್ಟಿ, ಜಾತಿ ಧರ್ಮಗಳ ನಡುವೆ ಸೌಹಾರ್ದ ವಾತಾವರಣ, ಆರೋಗ್ಯ ಪೂರ್ಣ ಮಕ್ಕಳ ಬೆಳವಣಿಗೆ ಕೂಡ ಭದ್ರತೆಯ ಭಾಗವಾಗಿದೆ ಎಂದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ ಮಾತನಾಡಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಒಸ್ವಾಲ್ ಪ್ರಕಾಶ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೋಶಾಧಿಕಾರಿ ಟಿ.ಎಸ್.ಪ್ರಸನ್ನ, ಪ್ರಮುಖರಾದ ಸನ್ನಿ ಡಿಸೋಜ, ಅಕ್ಕಮಹಾದೇವಿ ವೇದಿಕೆಯಲ್ಲಿದ್ದರು.
ದ.ಕ.ಜಿಲ್ಲಾ ಯುವ ಘಟಕದ ಪದಾಧಿಕಾರಿಗಳು: ಆದಿತ್ಯ ಎನ್. ಕೊಳ್ಳಾಜೆ (ಅಧ್ಯಕ್ಷ), ಶಿವಾನಂದ ಬಿ.ಸಿ.ರೋಡ್ (ಪ್ರಧಾನ ಕಾರ್ಯದರ್ಶಿ), ಸಂತೋಷ್ ಪನೆಕಲ್ (ಕಾರ್ಯದರ್ಶಿ), ಚಂದ್ರಶೇಖರ್ (ಸಂಘಟನಾ ಕಾರ್ಯದರ್ಶಿ), ರೋಶನ್ ಬಲ್ಲಾಳ್ (ಸಂಘಟನಾ ಉಪ ಕಾರ್ಯದರ್ಶಿ), ಖಾದರ್ ಮುಶೀರ್ (ಉಪಾಧ್ಯಕ್ಷ), ಮನೋಜ್ ಕುಮಾರ್ (ಕೋಶಾಧಿಕಾರಿ), ಚೇತನ್ ಬಂಟ್ವಾಳ (ಉಪ ಕಾರ್ಯದರ್ಶಿ), ಸುರೇಂದ್ರ (ಗೌರವಾಧ್ಯಕ್ಷ).







