ಜು.18ರಿಂದ ಯಕ್ಷ ಪಂಚಮಿ; ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಪ್ರಶಸ್ತಿಗೆ ಹಳ್ಳಾಡಿ ಜಯರಾಮ ಶೆಟ್ಟಿ ಆಯ್ಕೆ

ಹಳ್ಳಾಡಿ ಜಯರಾಮ ಶೆಟ್ಟಿ
ಉಡುಪಿ, ಜು.೧೬: ಹಟ್ಟಿಯಂಗಡಿಯ ಶ್ರೀಕೃಪಾಪೋಷಿತ ಯಕ್ಷಗಾನ ಮೇಳ ಪ್ರತಿವರ್ಷ ನಡೆಸುತ್ತಿರುವ ಯಕ್ಷ ಪಂಚಮಿ ಜು.೧೮ರಿಂದ ೨೨ರವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪ್ರತಿದಿನ ಸಂಜೆ ೭:೦೦ರಿಂದ ರಾತ್ರಿ ೧೦ರವರೆಗೆ ನಡೆಯಲಿದೆ ಎಂದು ಹಟ್ಟಿಯಂಗಡಿ ಮೇಳದ ಸಂಚಾಲಕ ರಂಜಿತ ಶೆಟ್ಟಿ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಯಕ್ಷ ಪಂಚಮಿ ಪರ್ಯಾಯ ಶ್ರೀಕೃಷ್ಣಾಪುರ ಮಠ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತಿನ ಸಹಯೋಗ ದೊಂದಿಗೆ ಎಂದರು.
ಐದು ದಿನಗಳ ಕಾರ್ಯಕ್ರಮವನ್ನು ಜು.೧೮ರ ಸಂಜೆ ಕೃಷ್ಣಾಪುರ ಮಠದ ದಿವಾನರಾದ ವರದರಾಜ್ ಭಟ್ ಉದ್ಘಾಟಿಸಲಿದ್ದು, ಗಣ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಮನೋಹರ ಶೆಟ್ಟಿ, ರವೀಂದ್ರ ಶೆಟ್ಟಿ, ಅರವಿಂದ ನಾಯಕ್ ಅಮ್ಮುಂಜೆ, ಗೋಪಾಲ ಬಂಗೇರ, ಜಯಕರ ಶೆಟ್ಟಿ ಇಂದ್ರಾಳಿ, ಶಿರಿಯಾರ ಚಂದ್ರಶೇಖರ ಶೆಟ್ಟಿ, ಮಾರಾಳಿ ಪ್ರತಾಪ್ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ.
ಬಳಿಕ ಪ್ರತಿದಿನ ಸಂಜೆ ೭:೦೦ರಿಂದ ಹಟ್ಟಿಯಂಗಡಿ ಮೇಳದ ಕಲಾವಿದರು ‘ಸುಭದ್ರಾ ಕಲ್ಯಾಣ’, ‘ಬಿಲ್ಲ ಹಬ್ಬ’, ‘ಶರಸೇತು’, ‘ಶ್ರೀಕೃಷ್ಣ ವಿವಾಹ’ ಹಾಗೂ ‘ವರಾನ್ವೇಷಣೆ’ ಪ್ರಸಂಗಗಳನ್ನು ಆಡಿ ತೋರಿಸಲಿದ್ದಾರೆ ಎಂದು ರಂಜಿತ ಶೆಟ್ಟಿ ತಿಳಿಸಿದರು.
ಹಳ್ಳಾಡಿಗೆ ಪ್ರಶಸ್ತಿ: ಜು.೨೨ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಈ ವರ್ಷ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಯಕ್ಷಗಾನ ಕಲಾವಿದರಿಗೆ ನೀಡಲಿರುವ ಮೊದಲ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಯಕ್ಷ ಪ್ರಶಸ್ತಿಯನ್ನು ಯಕ್ಷಗಾನ ರಂಗದ ಹಾಸ್ಯ ಚಕ್ರವರ್ತಿ ಎನಿಸಿದ ಹಳ್ಳಾಡಿ ಜಯರಾಮ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಶಸ್ತಿಯು ೧೦,೦೦೦ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಬಡಗುತಿಟ್ಟಿನ ಅಗ್ರಗಣ್ಯ ಹಾಸ್ಯ ಕಲಾವಿದರಾದ ೬೬ ವರ್ಷ ಪ್ರಾಯದ ಹಳ್ಳಾಡಿ ಅವರು ನಿರಂತರ ೨೪ ವರ್ಷ ಸಾಲಿಗ್ರಾಮ ಮೇಳ ಸೇರಿದಂತೆ ಕಮಲಶಿಲೆ, ಪೆರ್ಡೂರು, ಮುಲ್ಕಿ ಅಲ್ಲದೇ ತೆಂಕುತಿಟ್ಟಿನ ಕುಂಬಳೆ ಮೇಳದಲ್ಲೂ ಐದೂವರೆ ದಶಕಗಳ ಕಾಲ ಕಲಾಸೇವೆ ಮಾಡಿದ್ದಾರೆ.
ಹಳ್ಳಾಡಿಯ ಜಯರಾಮ ಶೆಟ್ಟಿ ಇವರು ಕುಂಜಾಲು ರಾಮಕೃಷ್ಣ, ವಿಟ್ಲ ಗೋಪಾಲಕೃಷ್ಣ ಶೆಟ್ಟಿ, ಗಣಪತಿ ಹೆಗಡೆ ಸಾಲಿನಲ್ಲಿ ಬರುವ ಅಭಿಜಾತ ಕಲಾವಿದರಾಗಿದ್ದಾರೆ.