ಶ್ರೀಲಂಕಾ ಅಧ್ಯಕೀಯ ಚುನಾವಣೆ ಪ್ರೇಮಸಿಂಘೆ ಸಹಿತ 4 ಮಂದಿ ಕಣದಲ್ಲಿ

ಕೊಲಂಬೋ, ಜು.16: ಶ್ರೀಲಂಕಾದ ಮುಂದಿನ ಅಧ್ಯಕ್ಷರ ಹುದ್ದೆಗೆ ಹಂಗಾಮಿ ಅಧ್ಯಕ್ಷ ರಣಿಲ್ ಪ್ರೇಮಸಿಂಘೆ, ಪ್ರಮುಖ ವಿಪಕ್ಷ ಮುಖಂಡ ಸಜಿತ್ ಪ್ರೇಮದಾಸ ಸಹಿತ 4 ಮಂದಿ ಅಭ್ಯರ್ಥಿಗಳು ಕಣದಲ್ಲಿ ಕಾಣಿಸಿಕೊಂಡಿದ್ದಾರೆ. ನೂತನ ಅಧ್ಯಕ್ಷರ ಆಯ್ಕೆಗೆ ನಡೆಯುವ ಚುನಾವಣಾ ಪ್ರಕ್ರಿಯೆಗೆ ಶನಿವಾರ ಚಾಲನೆ ದೊರಕಿದೆ.
ಪ್ರೇಮಸಿಂಘೆ ಮತ್ತು ಪ್ರೇಮದಾಸರಲ್ಲದೆ, ಎಸ್ಎಲ್ಪಿಪಿ ಪಕ್ಷದಿಂದ ದೂರವಾಗಿರುವ ದಲ್ಲಾಸ್ ಅಲಹಪ್ಪೆರುಮ ಜುಲೈ 20ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದಾರೆ. ಶನಿವಾರ ಸಂಸತ್ನ ಸಂಕ್ಷಿಪ್ತ ವಿಶೇಷ ಅಧಿವೇಶನ ನಡೆದಿದ್ದು ಗೊತಬಯ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಹುದ್ದೆಗೆ ಜುಲೈ 20ರಂದು ಚುನಾವಣೆ ನಡೆಯುವ ಬಗ್ಗೆ ಸಂಸತ್ತಿನ ಪ್ರಧಾನ ಕಾರ್ಯದರ್ಶಿ ಧಮ್ಮಿಕ ದಸ್ಸನಾಯಕೆ ಘೋಷಿಸಿದರು.
ಜುಲೈ 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಒಂದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳಿದ್ದರೆ ಮರುದಿನ ಚುನಾವಣೆ ನಡೆಯಲಿದೆ ಎಂದವರು ಹೇಳಿದ್ದಾರೆ. ಈ ಸಂದರ್ಭ ಮಾರ್ಕ್ಸ್ವಾದಿ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ಪಕ್ಷದ ಮುಖಂಡ ಅನುರಾ ದಿಸ್ಸನಾಯಕೆ ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸಿದರು.
ದೇಶದಲ್ಲಿ ಇದುವರೆಗೆ ನಡೆದುಕೊಂಡು ಬಂದಿರುವ ಜನತಾ ಚಳವಳಿಯ ಅನೇಕ ಆಕಾಂಕ್ಷೆ ಮತ್ತು ಸ್ಪೂರ್ತಿಯನ್ನು ನಮ್ಮ ಪಕ್ಷ ಪ್ರತಿನಿಧಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಅಧ್ಯಕ್ಷ ಹುದ್ದೆಗೆ ಸಮರ್ಥ ವ್ಯಕ್ತಿ ಎಂಬುದು ನಮ್ಮ ಭಾವನೆಯಾಗಿದೆ ಎಂದು ಜೆವಿಪಿಯ ವಕ್ತಾರ ಹರಿಣಿ ಅಮರಸೂರಿಯ ಹೇಳಿದ್ದಾರೆ. ಉಮೇದುವಾರಿಕೆ ಘೋಷಿಸಿದ ಬಳಿಕ ಮಾತನಾಡಿದ ಪ್ರಮುಖ ವಿಪಕ್ಷ ಸಾಮಗಿ ಬಲವೆಗಯ (ಎಸ್ಜೆಬಿ) ಪಕ್ಷದ ಮುಖಂಡ ಸಜಿತ್ ಪ್ರೇಮದಾಸ, ಇದೊಂದು ಕಠಿಣ ಹೋರಾಟವಾದರೂ ಸತ್ಯ ಎಂದಿಗೂ ಉಳಿಯುತ್ತದೆ ಎಂಬ ವಿಶ್ವಾಸವಿದೆ ಎಂದರು.
225 ಸದಸ್ಯ ಬಲದ ಸಂಸತ್ತಿನಲ್ಲಿ ಗೊತಬಯ ರಾಜಪಕ್ಸ ನೇತೃತ್ವದ ಶ್ರೀಲಂಕಾ ಪೊದುಜನ ಪೆರಮುನ (ಎಸ್ಎಲ್ಪಿಪಿ) ಪಕ್ಷದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಸ್ಎಲ್ಪಿಪಿ ಪಕ್ಷ ಪ್ರೇಮಸಿಂಘೆಗೆ ಅಧಿಕೃತ ಬೆಂಬಲ ಘೋಷಿಸಿದ್ದರೂ ಪಕ್ಷದ ಕೆಲ ಸದಸ್ಯರಿಂದ ಅಪಸ್ವರ ಕೇಳಿಬಂದಿದೆ. ಪಕ್ಷದ ಅಭ್ಯರ್ಥಿಯನ್ನು ಮಾತ್ರ ಬೆಂಬಲಿಸಬೇಕೆಂಬುದು ನನ್ನ ನಿಲುವಾಗಿದೆ. ಆದ್ದರಿಂದ ಪಕ್ಷದಿಂದ ಸಿಡಿದೆದ್ದಿರುವ ದಲ್ಲಾಸ್ ಅಲಹಪ್ಪೆರುಮರನ್ನು ಬೆಂಬಲಿಸಬೇಕು ಎಂದು ಎಸ್ಎಲ್ಪಿಪಿ ಪಕ್ಷದ ಅಧ್ಯಕ್ಷ ಜಿಎಲ್ ಪೆರಿಸ್ ಹೇಳಿದ್ದಾರೆ.