ದ.ಕ.ಜಿಲ್ಲೆಯಲ್ಲಿ ಬಿರುಸು ಪಡೆದ ಮಳೆ; ಬಟಪ್ಪಾಡಿ, ಪಣಂಬೂರು ಬೀಚ್‌ನಲ್ಲಿ ಕಡಲ್ಕೊರೆತ

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಶನಿವಾರ ಮತ್ತೆ ಮಳೆ ಬಿರುಸು ಪಡೆದಿದೆ. ಜೊತೆಗೆ ಬಿರುಗಾಳಿಯ ಆರ್ಭಟ ಹೆಚ್ಚಿವೆ. ಬೆಳಗ್ಗಿನಿಂದಲೇ ಆರಂಭವಾದ ಮಳೆ ಆಗಾಗ ಬಿರುಸಿನಿಂದ ಸುರಿಯುತ್ತಿತ್ತು.
ಮಳೆ, ಗಾಳಿಯ ಆರ್ಭಟದ ಮಧ್ಯೆ ಸಮುದ್ರವೂ ಭೋರ್ಗರೆಯುತ್ತಿದೆ. ಪರಿಣಾಮ ಉಳ್ಳಾಲದ ಬಟಪ್ಪಾಡಿಯಲ್ಲದೆ ಪಣಂಬೂರು ಬೀಚ್‌ನಲ್ಲಿ ಕಡಲ್ಕೊರೆತವಾಗಿದೆ. ಪಣಂಬೂರು ಬೀಚ್‌ನ ವಿಹಾರ ತಾಣಗಳಿಗೆ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿವೆ.
ಪ್ರವಾಸಿಗರ ನಿರ್ಬಂಧ: ಭಾರೀ ಅಲೆಗಳ ಹಿನ್ನೆಲೆಯಲ್ಲಿ ಪಣಂಬೂರು ಬೀಚ್‌ಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದರೂ ವೀಕೆಂಡ್ ಆದ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಬೀಚ್ ಬಳಿ ಹಗ್ಗವನ್ನು ಕಟ್ಟಿ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಭದ್ರತಾ ಸಿಬ್ಬಂದಿಯನ್ನೂ ನಿಯುಕ್ತಿಗೊಳಿಸಲಾಗಿದೆ.
ಮಳೆ ವಿವರ: ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ ೫೪ ಮಿ.ಮೀ. ಮಳೆ ದಾಖಲಾಗಿದೆ. ಬೆಳ್ತಂಗಡಿಯಲ್ಲಿ ೬೯.೭ ಮಿ.ಮೀ., ಬಂಟ್ವಾಳದಲ್ಲಿ ೩೫.೮ ಮಿ.ಮೀ., ಮಂಗಳೂರಿನಲ್ಲಿ ೩೧.೯ ಮಿ.ಮೀ., ಪುತ್ತೂರಿನಲ್ಲಿ ೪೮.೨ ಮಿ.ಮೀ., ಸುಳ್ಯದಲ್ಲಿ ೬೨.೬ ಮಿ.ಮೀ., ಮೂಡುಬಿದಿರೆಯಲ್ಲಿ ೫೨.೭ ಮಿ.ಮೀ., ಕಡಬದಲ್ಲಿ ೫೧.೭ ಮಿ.ಮೀ. ಮಳೆಯಾಗಿದೆ.
ಮಳೆ ಹಾನಿ: ದ.ಕ ಜಿಲ್ಲೆಯಲ್ಲಿ ಶನಿವಾರ ೬ ಮನೆಗಳು ಸಂಪೂರ್ಣ ಮತ್ತು ೧೬ ಮನೆಗಳು ಭಾಗಶಃ ಹಾನಿಗೀಡಾಗಿವೆ. ಒಟ್ಟಾರೆ ಈವರೆಗೆ ೮೯ ಮನೆಗಳು ಸಂಪೂರ್ಣ ಮತ್ತು ೫೨೫ ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಮೆಸ್ಕಾಂಗೆ ಸಂಬಂಧಿಸಿದಂತೆ ೧೪೮ ವಿದ್ಯುತ್ ಕಂಬಗಳು, ೩ ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿಗೀಡಾಗಿವೆ. ಒಟ್ಟಿನಲ್ಲಿ ಈವರೆಗೆ ೩,೫೧೬ ವಿದ್ಯುತ್ ಕಂಬಗಳು ಮತ್ತು ೨೩೪ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
*ದ.ಕ.ಜಿಲ್ಲೆಯ ಮಳೆ ವಿವರ
*ಮಂಗಳೂರು: ೩೧.೯ ಮಿ.ಮೀ.
*ಬಂಟ್ವಾಳ: ೩೫.೯ ಮಿ.ಮೀ.
*ಪುತ್ತೂರು: ೪೮.೨ ಮಿ.ಮೀ.
*ಬೆಳ್ತಂಗಡಿ: ೬೯.೭ ಮಿ.ಮೀ
*ಸುಳ್ಯ: ೬೨.೬ ಮಿ.ಮೀ.
*ಮೂಡುಬಿದಿರೆ: ೫೨.೭ ಮಿ.ಮೀ
*ಕಡಬ: ೫೧.೭ ಮಿ.ಮೀ
(ಸರಾಸರಿ-೫೪.೦ ಮಿ.ಮೀ.)