ಕಾಗುಣಿತ ತಪ್ಪಿನಿಂದ ಟ್ರೋಲ್ ಗೆ ಗುರಿಯಾದ ರಿಷಿ ಸುನಾಕ್
ಲಂಡನ್, ಜು.16: ಬ್ರಿಟನ್ನ ಮುಂದಿನ ಪ್ರಧಾನಿ ಆಯ್ಕೆಯ ರೇಸ್ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಭಾರತೀಯ ಮೂಲದ ಬ್ರಿಟನ್ ಸಂಸದ ರಿಷಿ ಸುನಾಕ್ , ಟಿವಿ ವಾಹಿನಿಯಲ್ಲಿ ಪ್ರಸಾರವಾದ ಚರ್ಚೆಯ ಸಂದರ್ಭ ತೋರಿಸಲಾದ ಬ್ಯಾನರ್ನಲ್ಲಿ ಕಂಡು ಬಂದ ಕಾಗುಣಿತ ತಪ್ಪಿನಿಂದ ವ್ಯಾಪಕ ಟ್ರೋಲ್ ಗೆ ಗುರಿಯಾಗಿದ್ದಾರೆ.
ತನ್ನ ಸಾಮರ್ಥ್ಯ ಮತ್ತು ಗಂಭೀರತೆಯ ಬಗ್ಗೆ ರಿಷಿ ಸುನಕ್ ಅವರ ಹೆಗ್ಗಳಿಕೆಯು ಅವರು ‘ಕ್ಯಾಂಪೇನ್’ ಎಂಬ ಪದವನ್ನು ತಪ್ಪಾಗಿ ಬರೆದ ಬ್ಯಾನರ್ ನ ಎದುರು ಕುಳಿತಿರದಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು ಎಂದು ‘ಬೈಲೈನ್ ಟೈಮ್ಸ್’ನ ಪ್ರತಿನಿಧಿ ಆ್ಯಡಮ್ ಬಿಯಂಕೋವ್ ಟ್ವೀಟ್ ಮಾಡಿದ್ದಾರೆ.
‘ರಿಷಿ ಸುನಾಕ್... ಕಾಗುಣಿತದ ಹೊರತಾಗಿ ವಿವರಣೆಯ ಮನುಷ್ಯ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿರುವ ಸುನಾಕ್ ‘ರೆಡಿ ಫಾರ್ ಸ್ಪೆಲ್ಚೆಕ್’ (ಕಾಗುಣಿತ ಪರಿಶೀಲನೆಗೆ ಸಿದ್ಧರಾಗಿರಿ) ಎಂದು ಹೇಳಿದ್ದಾರೆ. ಅಂದ ಹಾಗೆ ರೆಡಿ ಫಾರ್ ರಿಷಿ ಎಂಬುದು ಅವರ ಪ್ರಚಾರ ಘೋಷವಾಕ್ಯವಾಗಿದೆ. ಪ್ರಧಾನಿ ಹುದ್ದೆಗೆ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯ 2ನೇ ಹಂತದಲ್ಲೂ ಮುನ್ನಡೆ ಕಾಯ್ದುಕೊಂಡಿರುವ ಸುನಾಕ್ 101 ಮತ ಗಳಿಸಿದ್ದರೆ, ಅವರ ನಿಕಟ ಪ್ರತಿಸ್ಪರ್ಧಿ ಪೆನ್ನೀ ಮೋರ್ಡೌಂಟ್ 83 ಮತ ಗಳಿಸಿದ್ದಾರೆ ಎಂದು ವರದಿಯಾಗಿದೆ.