ಕಳೆದ 8 ವರ್ಷಗಳಲ್ಲಿ ಲಕ್ಷಾಂತರ ರೈತರ ಆದಾಯ ದ್ವಿಗುಣ: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

ಹೊಸದಿಲ್ಲಿ, ಜು. 16: ಕಳೆದ ಎಂಟು ವರ್ಷಗಳಲ್ಲಿ ದೇಶದ ಲಕ್ಷಾಂತರ ರೈತರ ಆದಾಯ ದ್ವಿಗುಣಗೊಂಡಿದೆ ಹಾಗೂ ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಸರಕಾರಗಳು, ವಿಜ್ಞಾನ ಸಮುದಾಯ ಮತ್ತು ರೈತ ಸಮುದಾಯಗಳು ನಿರಂತರ ಪ್ರಯತ್ನಗಳನ್ನು ನಡೆಸುತ್ತಾ ಬಂದಿವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶನಿವಾರ ಹೇಳಿದ್ದಾರೆ.
ಕಳೆದ 8 ವರ್ಷಗಳಲ್ಲಿ ದುಪ್ಪಟ್ಟು ಅಥವಾ ಅದಕ್ಕಿಂತಲೂ ಹೆಚ್ಚು ಆದಾಯ ಪಡೆದ 75,000 ರೈತರ ಯಶಸ್ಸಿನ ಕತೆಗಳನ್ನು ಒಳಗೊಂಡ ಇ-ಪುಸ್ತಕವೊಂದನ್ನು ತೋಮರ್ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಈ ಪುಸ್ತಕವನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಸಿದ್ಧಪಡಿಸಿದೆ.
ಈ ರೈತರ ಆದಾಯದಲ್ಲಿನ ಒಟ್ಟಾರೆ ಹೆಚ್ಚಳವು 125.44 ಶೇಕಡದಿಂದ 271.69 ಶೇಕಡ ಆಗಿದೆ ಎಂದು ಐಸಿಎಆರ್ ತಿಳಿಸಿದೆ. ಈ ಪೈಕಿ ಹೆಚ್ಚಿನ ಆದಾಯ ಹೆಚ್ಚಳವು ಹೆಚ್ಚಿನ ರಾಜ್ಯಗಳಲ್ಲಿ ತೋಟಗಾರಿಕಾ ಮತ್ತು ಗದ್ದೆಯ ಬೆಳೆಗಳಿಂದ ಬಂದಿದೆ ಎಂದು ಅದು ಹೇಳಿದೆ.
2016ರಲ್ಲಿ, 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಮಹತ್ವಾಕಾಂಕ್ಷೆಯ ಗುರಿಯೊಂದನ್ನು ಸರಕಾರ ಹಾಕಿಕೊಂಡಿತ್ತು.
ಇಲ್ಲಿ ಐಸಿಎಆರ್ನ 94ನೇ ಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ತೋಮರ್, ದೇಶದಲ್ಲಿ 14 ಕೋಟಿ ರೈತರಿದ್ದು, ಅವರ ಪೈಕಿ 85 ಶೇಕಡ ಮಂದಿ ಸಣ್ಣ ಮತ್ತು ಅತಿ ಸಣ್ಣ ರೈತರು ಎಂದು ಹೇಳಿದರು.