ತುಮಕೂರು: ಆಟೋ ಚಾಲಕ ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ; ಮುಂದುವರೆದ ಶೋಧ

ತುಮಕೂರು: ಶನಿವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಆಟೋ ಚಾಲಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ತುಮಕೂರಿನ ದಾನ ಪ್ಯಾಲೇಸ್ ಸಮೀಪದ ರೈಲ್ವೆ ಕೆಳ ಸೇತುವೆ ಬಳಿ ನಡೆದಿದೆ. ಸೇತುವೆ ಬಳಿ ಆಟೋ ಮಾತ್ರ ಇದ್ದು, ಚಾಲಕ ನಾಪತ್ತೆಯಾಗಿದ್ದು ಆತನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ನಾಪತ್ತೆಯಾಗಿರುವ ಆಟೋ ಚಾಲಕನನ್ನು ಶಾಂತಿ ನಗರ ನಿವಾಸಿ ಅಂಜಾದ್ ಖಾನ್(43) ಎಂದು ಗುರುತಿಸಲಾಗಿದೆ. ಚಾಲಕ ಆಟೋವನ್ನು ದಾನ ಪ್ಯಾಲೇಸ್ ನಿಂದ ಗುಬ್ಬಿ ಗೇಟ್ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸೇತುವೆಯ ಸಮೀಪ ಆಟೋ ನಿಲ್ಲಿಸಿ ಮಳೆ ನೀರು ಹರಿಯುತ್ತಿರುವುದನ್ನು ವಿಡಿಯೋ ಮಾಡಲು ತೊಡಗಿದ್ದಾರೆ. ಈ ಸಂದರ್ಭದಲ್ಲಿ ರಭಸದಿಂದ ಬಂದ ಮಳೆ ನೀರಿಗೆ ಚಾಲಕ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್,ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕ,ಪಾಲಿಕೆ ವಿರೋಧಪಕ್ಷದ ನಾಯಕ ಜೆ.ಕುಮಾರ್, ಸ್ಥಾಯಿಸಮಿತಿ ಅಧ್ಯಕ್ಷ ನಯಾಜ್, ಸದಸ್ಯ ಮಂಜುನಾಥ್ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಗ್ನಿಶಾಮಕ ಸಿಬ್ಬಂದಿ ಶೋಧಕಾರ್ಯ ಮುಂದುವರೆಸಿದ್ದಾರೆ.





