ಮೂವರು ಸಹದ್ಯೋಗಿಗಳಿಗೆ ಗುಂಡಿಕ್ಕಿ, ಐಟಿಬಿಪಿ ಯೋಧನ ಆತ್ಮಹತ್ಯೆ

ಶ್ರೀನಗರ,ಜು.16: ಜಮ್ಮುಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಇಂಡೊ ಟಿಬೆಟಿಯನ್ ಗಡಿ ಪೊಲೀಸ್ ( ಐಟಿಬಿಪಿ ) ಪಡೆಯ ಯೋಧನೊಬ್ಬ ತನ್ನ ಮೂವರು ಸಹದ್ಯೋಗಿಗಳನ್ನು ಗುಂಡಿಕ್ಕಿ ಗಾಯಗೊಳಿಸಿದ್ದು, ಆನಂತರ ತನಗೆ ತಾನೇ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಕಾನ್ಸ್ಟೇಬಲ್ ಭೂಪೇಂದ್ರ ಸಿಂಗ್ ತನ್ನ ಸಹದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಒಬ್ಬ ಹೆಡ್ ಕಾನ್ಸ್ಟೇಬಲ್ ಹಾಗೂ ಇಬ್ಬರು ಹೆಡ್ ಕಾನ್ಸ್ಟೇಬಲ್ ಗಾಯಗೊಂಡಿದ್ದಾರೆಂದು ಐಟಿಬಿಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀನಗರದ ದೇವಿಕಾ ಘಾಟ್ ಸಾಮುದಾಯಿಕ ಕೇಂದ್ರದಲ್ಲಿ ಶನಿವಾರ 3:30ರ ವೇಳೆಗೆ ಈ ಘಟನೆ ನಡೆದಿದೆಯೆಂದು ಮೂಲಗಳು ತಿಳಿಸಿವೆ. ಕಳೆದ 24 ತಾಸುಗಳಲ್ಲಿ ಜಮ್ಮುಕಾಶ್ಮೀರದಲ್ಲಿ ನಡೆದ ಭದ್ರತಾಪಡೆ ಸಿಬ್ಬಂದಿಯ ನಡುವೆ ಗುಂಡು ಹಾರಾಟ ನಡೆದ ಎರಡನೆ ಘಟನೆ ಇದಾಗಿದೆ. ಶುಕ್ರವಾರದದಂದು ಪೂಂಚ್ ಜಿಲ್ಲೆಯಲ್ಲಿ ನಡೆದ ಇದೇ ರೀತಿಯ ಘಟನೆಯೊಂದರಲ್ಲಿ ಇಬ್ಬರು ಸೇನಾ ಯೋಧರು ಸಾವನ್ನಪ್ಪಿದ್ದರು ಹಾಗೂ ಇನ್ನೋರ್ವ ಗಾಯಗೊಂಡಿದ್ದನು.





