ಸಿಯುಇಟಿ ತಪ್ಪಿ ಹೋದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಇಲ್ಲ: ವಿಶ್ವವಿದ್ಯಾನಿಲಯ ಅನುದಾನ ಆಯೋಗ

ಹೊಸದಿಲ್ಲಿ, ಜು. 16: ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆ ಅಥವಾ ಸಿಯುಇಟಿ ತಪ್ಪಿ ಹೋದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದಿಲ್ಲ ಎಂದು ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಹೇಳಿದೆ.
ದೇಶದಾದ್ಯಂತ ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಇತರ ಭಾಗೀದಾರ ವಿಶ್ವವಿದ್ಯಾನಿಲಯಗಳು ಹಾಗೂ ಸಂಸ್ಥೆಗಳು ನೀಡುವ ವಿವಿಧ ಕೋರ್ಸ್ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ಈ ವರ್ಷ ಪರಿಚಯಿಸಲಾದ ಅಖಿಲ ಭಾರತ ಪ್ರವೇಶ ಪರೀಕ್ಷೆ ಸಿಯುಇಟಿ. ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಪದವಿ ಶಿಕ್ಷಣಕ್ಕೆ ಈ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.
‘‘ಪರೀಕ್ಷಾ ಕೇಂದ್ರಗಳಿಗೆ ಎರಡು ಗಂಟೆ ಮುಂಚಿತವಾಗಿ ತಲುಪುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗಿತ್ತು’’ ಎಂದು ಯುಜಿಸಿಯ ಅಧ್ಯಕ್ಷ ಎಂ. ಜಗದೀಶ್ ಕುಮಾರ್ ಅವರು ಶುಕ್ರವಾರ ಹೇಳಿದ್ದರು.
‘‘ಪರೀಕ್ಷೆ ಆರಂಭವಾದ ಬಳಿಕ 30 ನಿಮಿಷಗಳ ರಿಯಾಯತಿ ಅವಧಿ ನೀಡಲಾಗಿತ್ತು. ಆದರೆ, ಅನಂತರ ಬಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಆದುದರಿಂದ ನಾವು ಯಾವುದೇ ರೀತಿಯಲ್ಲೂ ಮರು ಪರೀಕ್ಷೆ ನಡೆಸುವುದಕ್ಕೆ ಕಾರಣವಿಲ್ಲ’’ ಎಂದು ಅವರು ಹೇಳಿದ್ದಾರೆ.
ಪರೀಕ್ಷಾ ಕೇಂದ್ರಗಳನ್ನು ಇದ್ದಕ್ಕಿದ್ದಂತೆ ಬದಲಾವಣೆ ಮಾಡಿರುವುದರಿಂದ ಹಲವು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂಬ ಮಾಧ್ಯಮ ವರದಿಯ ನಡುವೆ ಕುಮಾರ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪರೀಕ್ಷೆಯ ಮುನ್ನಾ ದಿನ ದಿಲ್ಲಿ ಸೇರಿದಂತೆ ಸುಮಾರು 15 ಕೇಂದ್ರಗಳನ್ನು ಬದಲಾಯಿಸಿತ್ತು.
ಪರೀಕ್ಷಾ ಕೇಂದ್ರ ಬದಲಾಗಿರುವ ಕಾರಣದಿಂದ ಅದನ್ನು ಹುಡುಕಲು ಸಾಧ್ಯವಾಗದೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ರಾಜಕೀಯ ಸರ್ವೋದಯ ಕನ್ಯಾ ವಿದ್ಯಾಲಯ ಲಕ್ಷ್ಮೀ ನಗರದ ವಿದ್ಯಾರ್ಥಿನಿ ಭೂಮಿ ಖನ್ನಾ ಅವರು ಶುಕ್ರವಾರ ಹೇಳಿದ್ದರು.







