ಹೆಬ್ಬಾಳ ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆರೋಪ
ಮುಖ್ಯಮಂತ್ರಿಯೆ ‘ದಿ ಬೆಸ್ಟ್ ಎಂಎಲ್‍ಎ’ ಎಂದಿದ್ದಾರೆ: ಬೈರತಿ ಸುರೇಶ್

ಬೆಂಗಳೂರು, ಜು.16: ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ನಗರೋತ್ಥಾನ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇಲ್ಲಿನ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಶೇ.20ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಆರೋಪಿಸಿದರು.
ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರೋತ್ಥಾನ ಯೋಜನೆಯಡಿ ಆಗಿರುವ ಭ್ರಷ್ಟಾಚಾರದಲ್ಲಿ ಶಾಸಕರಿಗೆ ಶೇ.20ರಷ್ಟು, ಅಧಿಕಾರಿಗಳಿಗೆ ಶೇ.30ರಷ್ಟು ಕಮಿಷನ್ ಹೋಗಿದೆ. ಈ ಹಗರಣದಲ್ಲಿ ಇಬ್ಬರು ಕಾರ್ಯಪಾಲಕ ಎಂಜಿನಿಯರ್‍ಗಳು, ನಾಲ್ವರು ಸಹಾಯಕ ಕಾರ್ಯಪಾಲಕ ಎಂಜಿನಿಯರ್‍ಗಳು ಸೇರಿದ್ದಾರೆ ಎಂದು ದೂರಿದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಸರಕಾರದ ಅವಧಿಯಲ್ಲಿ ನೀಡಿರುವ ಒಟ್ಟು 650 ಕೋಟಿ ರೂ.ವೆಚ್ಚದ 12 ಕಾಮಗಾರಿಗಳಲ್ಲಿ ಶೇ.40ರಷ್ಟು ಮಾತ್ರ ಕೆಲಸವಾಗಿದೆ. ಇನ್ನುಳಿದ ಶೇ.60ರಷ್ಟು ಕೆಲಸವೇ ಆಗಿಲ್ಲ. ನಗರೋತ್ಥಾನ ಯೋಜನೆಯಡಿ ತಲಾ 90 ಕೋಟಿ ರೂ.ಗಳಂತೆ ಒಟ್ಟು 450 ಕೋಟಿ ರೂ.ಗಳು ಬಿಡುಗೆಯಾಗಿದ್ದರೂ, ಈ ಅವಿವೇಕಿ ಶಾಸಕರಿಂದ ನಾಲ್ಕು ವರ್ಷಗಳಲ್ಲಿ ಸಾಧನೆ ಶೂನ್ಯವಾಗಿದೆ ಎಂದು ಕಟ್ಟಾ ಸುಬ್ರಹ್ಮಣ್ಯನಾಯ್ಡು ಆರೋಪಿಸಿದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಗಿರುವ ಅವ್ಯವಹಾರ, ಭ್ರಷ್ಟಾಚಾರ, ಹಗರಣದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಸಿಬಿ ಮೂಲಕ ತನಿಖೆ ನಡೆಸಿ, ಕಮಿಷನ್ ಪಡೆಯುತ್ತಿರುವ ಶಾಸಕ ಬೈರತಿ ಸುರೇಶ್‍ರನ್ನು ಬಂಧಿಸುವಂತೆ ಅವರು ಒತ್ತಾಯಿಸಿದರು.
ಕಟ್ಟಾ ಸುಬ್ರಹ್ಮಣ್ಣ ನಾಯ್ಡುಗೆ ಪ್ರಶ್ನೆಗಳ ಸುರಿಮಳೆ: ತಮ್ಮ ವಿರುದ್ಧ ಕಮಿಷನ್ ಆರೋಪ ಮಾಡಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಪತ್ರಿಕಾ ಪ್ರಕಟಣೆ ಮೂಲಕ 15 ಪ್ರಶ್ನೆಗಳನ್ನು ಮುಂದಿಟ್ಟಿರುವ ಶಾಸಕ ಬೈರತಿ ಸುರೇಶ್, ಅವರಿಂದ ಉತ್ತರ ಬಯಸಿದ್ದಾರೆ.
ಆರ್.ಟಿ.ನಗರದಲ್ಲಿ ನಡೆದ ರವೀಂದ್ರನಾಥ್ ಠಾಗೋರ್ ಅವರ ಪುತ್ಥಳಿ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನಗೆ ಹೆಬ್ಬಾಳ ಕ್ಷೇತ್ರದ ಪ್ರಾಮಾಣಿಕ, ದಕ್ಷ, ನಿಷ್ಠಾವಂತ ಶಾಸಕ ‘ದಿ ಬೆಸ್ಟ್ ಎಂಎಲ್‍ಎ' ಎಂದು ಸಾರ್ವಜನಿಕ ವೇದಿಕೆಯಲ್ಲಿ ಪ್ರಶಂಸಿಸಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಕಟ್ಟಾ ಸುಬ್ರಮಣ್ಯ ನಾಯ್ಡುರವರೇ ಎಂದು ಬೈರತಿ ಸುರೇಶ್ ಪ್ರಶ್ನಿಸಿದ್ದಾರೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಬ್ಬಾಳ ಕುಂತಿ ಗ್ರಾಮ ಗುಡ್ಡದಹಳ್ಳಿ ಸರ್ವೆ ನಂ:1ರಲ್ಲಿ 03 ಎಕರೆ 45 ಗುಂಟೆ ಸರಕಾರಿ ಜಾಗದಲ್ಲಿ ನೀವು ಅಕ್ರಮವಾಗಿ ಟಿಡಿಆರ್ ಪಡೆದು 200 ಕೋಟಿ ರೂ.ಹಗರಣ ನಡೆದಿರುವುದು ಸರಕಾರಿ ಮಟ್ಟದಲ್ಲಿ ಹಾಗೂ ಕೋರ್ಟ್ ತನಿಖೆಯು ಯಾವ ಹಂತದಲ್ಲಿದೆ? ಎಂದು ಅವರು ಕೇಳಿದ್ದಾರೆ.
ನಿಮ್ಮ ಇಟಾಸ್ಕ ಕಂಪನಿಯ ಮೇಲೆ ಸಿಬಿಐ, ಈ.ಡಿ ಹಾಗೂ ಲೋಕಾಯುಕ್ತರು ನಡೆಸುತ್ತಿರುವ ತನಿಖೆಗಳು ಎಷ್ಟು ಇವೆ? ಇನ್ನೂ ಎಷ್ಟು ಕ್ರಿಮಿನಲ್ ಹಗರಣಗಳು ಮತ್ತು ಸಿವಿಲ್ ಹಗರಣಗಳು ಹಾಗೂ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯಿದೆಗಳ ಕೇಸ್ ಹಾಗೂ ಬಾಗಲೂರು ಮತ್ತು ಬಂಡ ಕೊಡಗೇನಹಳ್ಳಿ ಸುತ್ತಮುತ್ತಲಿನ ಪುದೇಶಗಳಲ್ಲಿ ನಿಮ್ಮ ಮೇಲೆ ಇರುವ ಮೊಕದ್ದಮೆಗಳು ಎಷ್ಟು? ಎಂದು ಸುರೇಶ್ ಪ್ರಶ್ನಿಸಿದ್ದಾರೆ.
ಹೈಕೋರ್ಟ್ ಪಿಟೇಶನ್ ನಂ: 432/2013 ಹಾಗೂ ಕ್ರೈಂ ನಂ:57/2010ರ ಕೇಸ್ ತನಿಖೆ ಯಾವ ಮಟ್ಟದಲ್ಲಿದೆ? ಲಿಪೋಮ್ ಕ್ಯಾನ್ಸರ್ ಎಂದು ನೀವು ಲಂಡನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೀರಾ? ಈಗ ಚಿಕಿತ್ಸೆ ಯಾವ ಹಂತದಲ್ಲಿದೆ? ತಮಗೆ ಈಗಲೂ ಮೆಡಿಕಲ್ ಬೇಲ್ ಇದೆಯೋ ಅಥವಾ ಇಲ್ಲವೋ? ಯಾವ ತರಹದ ಬೇಲ್‍ನಲ್ಲಿದೀರಾ? ರೆಗ್ಯುಲರ್ ಬೇಲ್ ಪಡೆದಿದ್ದೀರಾ? ಎಂದು ಅವರು ಕೇಳಿದ್ದಾರೆ.
ಕೆಐಎಡಿಬಿ ಲ್ಯಾಂಡ್ ಕೇಸ್ ಯಾವ ಹಂತದಲ್ಲಿದೆ? ಪಿಟೇಶನ್ ನಂ: 5698/2019 ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ಆರ್.ಸುಭಾμï ನೀಡಿರುವ ತೀರ್ಪು ಏನು ಬಂದಿದೆ ತಿಳಿಸುವಿರಾ? ಹಾಗೂ 27 ಕೋಟಿ ಹಗರಣದಲ್ಲಿ ಕುಟುಂಬದ ವಿರುದ್ಧ ಈ.ಡಿ ಕೇಸ್ ಯಾವ ಹಂತದಲ್ಲಿದೆ? 2020ರ ಡಿ.19ರಂದು ಹೈಕೋರ್ಟ್ ನೀಡಿರುವ ತೀರ್ಪು ಮನಿಲಾಂಡ್ರಿಗ್ ಕೇಸ್‍ನ ಬಗ್ಗೆ ವಿವಿರ ನೀಡುವಿರಾ? ಇನ್ನೂ ಈ ಕೇಸ್ ಯಾವ ಹಂತದಲ್ಲಿದೆ? ಇಂಡ್ ಸಿಂಡ್ ಡೆವಲಪರ್ಸ್‍ನವರಿಗೆ 3 ಕೋಟಿ ವಂಚನೆ ಮಾಡಿರುವ ಕ್ರಿಮಿನಲ್ ಮೊಕದ್ದಮೆ ಯಾವ ಹಂತದಲ್ಲಿದೆ? ಎಂದು ಸುರೇಶ್ ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಡಿನೋಟಿಫೀಕೇಶನ್ ಹಗರಣದ ಕೇಸ್ ಹೈಕೋರ್ಟ್ ಮಟ್ಟದಲ್ಲಿ ಯಾವ ಹಂತದಲ್ಲಿದೆ? ಆರ್‍ಟಿಐ ಕಾರ್ಯಕರ್ತರನ್ನು ಬಳಸಿಕೊಂಡು ಕ್ಷೇತ್ರದ ಎಲ್ಲ ವಿಭಾಗದ ಸರಕಾರಿ ಅಧಿಕಾರಿಗಳನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿರುವ ನೀವು, ಕಟ್ಟಾ ಜಗದೀಶ್ ಹಾಗೂ ಬಿಜೆಪಿ ಕಾರ್ಯಕರ್ತರು ಹಣ ವಸೂಲಿ ಮಾಡುತ್ತಿರುವ ಬಗ್ಗೆ ನಿಮ್ಮ ಉತ್ತರವೇನು? ಎಂದು ಅವರು ಕೇಳಿದ್ದಾರೆ.
ಗಂಗಾನಗರ, ಗಂಗೇನಹಳ್ಳಿ ವಾರ್ಡ್‍ಗಳಲ್ಲಿ ನೀವು ಹಾಗೂ ನಿಮ್ಮ ಜೊತೆಯಲ್ಲಿರುವ ರೌಡಿಗಳು ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಸೇರಿಸುತ್ತಿರುವವರ ಬಗ್ಗೆ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ? ಒಂದು ತಿಂಗಳ ಹಿಂದೆ ಚೋಳನಾಯ್ಕನಹಳ್ಳಿ ನಿವಾಸಿ ಮುನಿಲಕ್ಷಮ್ಮ ನಿಮ್ಮ ಬಳಿ ಸಹಾಯ ಕೇಳಿ ಬಂದಾಗ ಅವರನ್ನು ನೀವು ದಲಿತ ಮಹಿಳೆ ಎಂದು ಹೀಯಾಳಿಸಿರುವುದು ಹಾಗೂ ಆಕೆ ನಿಮ್ಮ ಮೇಲೆ ಪ್ರತಿಭಟನೆ ನಡೆಸಿರುವ ಬಗ್ಗೆ ನಿಮ್ಮ ಅನಿಸಿಕೆ? ಎಂದು ಸುರೇಶ್ ಪ್ರಶ್ನಿಸಿದ್ದಾರೆ.
ಕ್ಷೇತ್ರದಲ್ಲಿ ನಿಮ್ಮ ಗೂಂಡಾ ಪಡೆಯವರು ಜನರಲ್ಲಿ ಭಯಪಡಿಸಿ, ನಮ್ಮ ಸರಕಾರ ಇದೆ ನಾವುಗಳು ಏನು ಬೇಕಾದರೂ ಮಾಡುತ್ತೇವೆ ಎಂದು ಹೇಳುಕೊಂಡು ಓಡಾಡುತ್ತಿರುವುದು ನಿಜಾನಾ? ನಿಮ್ಮ ಅಭಿಪ್ರಾಯ? ಎಚ್.ಎಂ.ಟಿ ಮೈದಾನದಲ್ಲಿ ತಮ್ಮ ಹುಟ್ಟುಹಬ್ಬದ ಆಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾದ ವೇದಿಕೆಯಲ್ಲಿ ಕ್ಷೇತ್ರದ 8 ವಾರ್ಡ್‍ಗಳ ಮೀಸಲಾತಿ ಮತ್ತು ವಾರ್ಡ್ ವಿಂಗಡಣೆಯನ್ನು ನನಗೆ ಹೇಗೆ ಬೇಕೋ ಹಾಗೇ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದೀರಾ. ಇದಕ್ಕೆ ಮುಖ್ಯಮಂತ್ರಿಯನ್ನು ಅಭಿನಂದಿಸುತ್ತೇನೆ ಎಂದು ಹೇಳುವುದು ಕ್ರಿಮಿನಲ್ ಅಪರಾಧವಲ್ಲವೇ? ಸಂವಿಧಾನದ ದುರುಪಯೋಗವಲ್ಲವೇ? ಎಂದು ಅವರು ಕೇಳಿದ್ದಾರೆ.
ಮೀಸಲಾತಿ, ವಾರ್ಡ್ ವಿಂಗಡಣೆ ಕುರಿತು ನೀವು ನೀಡಿರುವ ಹೇಳಿಕೆಯ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‍ನಲ್ಲಿ ದಾವೆ ಹೂಡಲಿದ್ದಾರೆ ನಿಮ್ಮ ಅಭಿಪ್ರಾಯವೇನು? ಎಂದು ಸುರೇಶ್ ಪ್ರಶ್ನಿಸಿದ್ದಾರೆ.







