ಬೆಂಗಳೂರು: 24 ಗಂಟೆಗಳಲ್ಲಿ ಇಬ್ಬರು ಮಹಿಳೆಯರು ಸೇರಿ ಐವರ ಹತ್ಯೆ

ಬೆಂಗಳೂರು: ನಗರದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳನ್ನು ಇಬ್ಬರು ಮಹಿಳೆಯರು ಸೇರಿದಂತೆ 5 ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು timesofindia.com ವರದಿ ಮಾಡಿದೆ.
ದೇವನಹಳ್ಳಿಯ ಐಶ್ವರ್ಯ ಲೇಔಟ್‍ನಲ್ಲಿ ಅಂಚಲಾ ತುಳಸಿಯಾನ್ (57) ಎಂಬ ಮಹಿಳೆಯನ್ನು ಆಕೆಯ ಮನೆಯಲ್ಲೇ ಚಾಕುವಿನಿಂದ ಇರಿದು ಸಾಯಿಸಲಾಗಿದೆ. ಇವರ ಪತಿ ದೇವನಹಳ್ಳಿಯಲ್ಲಿ ಹಾರ್ಡ್‍ವೇರ್ ಅಂಗಡಿ ಹೊಂದಿದ್ದಾರೆ. ಮಹಿಳೆ ಒಬ್ಬಂಟಿಯಾಗಿದ್ದರು ಎನ್ನಲಾಗಿದ್ದು, ಮನೆಯಿಂದ 3 ಲಕ್ಷ ನಗದು ಮತ್ತು ಚಿನ್ನ ಇದ್ದ ಪೆಟ್ಟಿಗೆ ಕಳವಾಗಿದೆ ಎಂದು ಪತಿ ಅಜಿತ್ ಹೇಳಿದ್ದಾರೆ. ಸಂಜೆ ಮಗಳು ಹಾಗೂ ಅಳಿಯ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಮತ್ತೊಂದು ಘಟನೆಯಲ್ಲಿ 21 ವಯಸ್ಸಿನ ಗುಜರಿ ವ್ಯಾಪಾರಿ ಪ್ರಜ್ವಲ್ ಎಂಬವರನ್ನು ಯುವತಿಯೊಬ್ಬಳ ಸಹೋದರ ಹಾಗೂ ಸಹಚರರು ಥಳಿಸಿ ಹತ್ಯೆ ಮಾಡಿದ್ದಾರೆ. ಬೈಪನಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಹತ್ಯೆಗೀಡಾದ ವ್ಯಕ್ತಿ ಮೊದಲು ಯುವತಿಯನ್ನು ಚುಡಾಯಿಸಿದ್ದೇ, ಘಟನೆಗೆ ಕಾರಣ ಎನ್ನಲಾಗಿದೆ.
ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಮೊಬೈಲ್ ಕಸಿದುಕೊಳ್ಳುವ ವೇಳೆ ಪ್ರತಿರೋಧ ವ್ಯಕ್ತಪಡಿಸಿದ ಸೋನು ಥಾಮಸ್ (31) ಎಂಬಾತನನ್ನು ಕತ್ತುಸೀಳಿ ಬರ್ಬರವಾಗಿ ಹತ್ಯೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮತ್ತೊಂದು ಘಟನೆಯಲ್ಲಿ ಆನೇಕಲ್‌ನ ವೆಂಕಟೇಶ ಆಚಾರಿ ಎಂಬ ನೇಕಾರ ತನ್ನ ಪತ್ನಿ ಪ್ರೇಮಾ ಆಚಾರಿ (25) ಯನ್ನು ಶಂಕಿಸಿ ಹತ್ಯೆ ಮಾಡಿದ್ದಾನೆ ಎಂದು ಆಪಾದಿಸಲಾಗಿದೆ.
ಶನಿವಾರ ಬೆಳಗ್ಗೆ ಶಿವಾಜಿನಗರದಲ್ಲಿ ಡಿ.ಜೆ.ಹಳ್ಳಿಯ ಜಾವೇದ್ ಖಾನ್ (25) ಎಂಬವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿದ್ದಾರೆ. ಬಂಬೂ ಬಜಾರ್ ಬಳಿ ಮಹಿಳೆಯೊಬ್ಬರ ಮನೆಗೆ ಖಾನ್ ಹೋಗಿದ್ದನ್ನು ಗಮನಿಸಿ ಹೊಂಚುಹಾಕಿ ದಾಳಿ ಮಾಡಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.







