ಸಿದ್ದರಾಮಯ್ಯ, ಎಚ್.ಡಿ.ಕೆ., ಲಲಿತಾ ನಾಯ್ಕ್, ದೇವನೂರು ಸೇರಿದಂತೆ ಹಲವರಿಗೆ 3ನೇ ಬಾರಿಗೆ ಕೊಲೆ ಬೆದರಿಕೆ ಪತ್ರ!

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವೆ ಡಾ. ಬಿ.ಟಿ.ಲಲಿತಾ ನಾಯ್ಕ್, ದೇವನೂರು ಮಹಾದೇವ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರ ಹೆಸರು, ಫೋಟೋ ಉಲ್ಲೇಖಿಸಿ ದುಷ್ಕರ್ಮಿಗಳು ಮೂರನೇ ಬಾರಿಗೆ ಕೊಲೆ ಬೆದರಿಕೆ ಪತ್ರ ರವಾನಿಸಿದ್ದಾರೆ.
ಲಲತಾ ನಾಯ್ಕ್ ಅವರ ಸಂಜಯನಗರ ನಿವಾಸದ ವಿಳಾಸಕ್ಕೆ ಪತ್ರ ಬರೆದಿರುವ ದುಷ್ಕರ್ಮಿಗಳು, ನೀವು ನಿಜವಾದ ದೇಶ ದ್ರೋಹಿಗಳು ಎಂದಿದ್ದಾರೆ. ಪಠ್ಯದಲ್ಲಿ ದೇಶ ಪ್ರೇಮ, ದೇಶ ಭಕ್ತಿ, ದೇಶ ರಕ್ಷಣೆ ಪಾಠ ಸೇರಿಸಿದಕ್ಕೆ ನಿಮಗೆ ಭಯವಾಗುತ್ತಿದೆ.
ಭಯೋತ್ಪಾದಕರು, ನಕ್ಸಲೈಟ್ ಗಳು, ಮಾವೋವಾದಿಗಳು, ದೇಶ ದ್ರೋಹಿ ಮುಸ್ಲಿಮರಿಗೆ ಬೆಂಬಲವಾಗಿ ನಿಂತಿದ್ದೀರಿ. ಕಾರ್ಯಕ್ರಮದಲ್ಲಿ ನಮ್ಮ ವೀರ ಸೈನಿಕರ ಬಗ್ಗೆ ಅಗೌರವವಾಗಿ ಮಾತನಾಡಿದ್ದೀರಿ. ನಿಮ್ಮನ್ನೆಲ್ಲಾ ದೇಶ ಬಿಟ್ಟು ಓಡಿಸಬೇಕು. ಇಷ್ಟೇ ಸಾಲದು ಗುಂಡಿಟ್ಟು ಸಾಯಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದಲ್ಲಿ ಜೈ ಶ್ರೀರಾಮ್, ಭಾರತ ಮಾತೆ, ಕರ್ನಾಟಕ ಮಾತೆ ಎಂದು ಬರೆದಿದ್ದಾರೆ. ಯಾರು ಮುಸ್ಲಿಮರ ಪರವಾಗಿ ಮಾತನಾಡುತ್ತಾರೋ ಅಂತವರು ರಕ್ತ ಹೀರುವವರು ಎಂದು ಉಲ್ಲೇಖಿಸಲಾಗಿದೆ.
ಒಟ್ಟಿನಲ್ಲಿ ಇದೇ ತಿಂಗಳಲ್ಲಿ ಮೂರು ಬೆದರಿಕೆ ಪತ್ರಗಳು ಬಂದಿದ್ದರೂ, ಪೊಲೀಸರು ಸೂಕ್ತ ತನಿಖೆ ನಡೆಸುವಲ್ಲಿ ವಿಫಲರಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.






.jpeg)


