ಯುಎಪಿಎ ಪ್ರಕರಣದಲ್ಲಿ 5 ವರ್ಷ ಜೈಲುವಾಸ ಅನುಭವಿಸಿದ 121 ಆದಿವಾಸಿಗಳನ್ನು ಖುಲಾಸೆಗೊಳಿಸಿದ ಛತ್ತೀಸ್ಗಢ ನ್ಯಾಯಾಲಯ

NIA, Photo: PTI
ಹೊಸದಿಲ್ಲಿ: 2017 ರ ಬುರ್ಕಾಪಾಲ್ ದಾಳಿಯಲ್ಲಿ ಮಾವೋವಾದಿಗಳಿಗೆ ಸಹಾಯ ಮಾಡಿದ ಆರೋಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿಪ್ರಕರಣ ಎದುರಿಸುತ್ತಿದ್ದ 121 ಆದಿವಾಸಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಛತ್ತೀಸ್ಗಢದ ನ್ಯಾಯಾಲಯವು ಶುಕ್ರವಾರ ಖುಲಾಸೆಗೊಳಿಸಿದೆ.
ದಾಂತೇವಾಡದ ನಿಯೋಜಿತ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದ ಆದೇಶವನ್ನು ಪ್ರಕಟಿಸಿದ್ದು, ಐದು ವರ್ಷಗಳಿಂದ ಜೈಲಿನಲ್ಲಿದ್ದ ಆದಿವಾಸಿಗಳನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.
ಎಪ್ರಿಲ್ 24, 2017 ರ ಸಂಜೆ, ಬುರ್ಕಪಾಲ್ ಗ್ರಾಮದಿಂದ 100 ಮೀಟರ್ ದೂರದಲ್ಲಿ ಕೇಂದ್ರ ಪೊಲೀಸ್ ಮೀಸಲು ಪಡೆಯ (ಸಿಆರ್ ಪಿಎಫ್ ) 74 ನೇ ಬೆಟಾಲಿಯನ್, ಮಾವೋವಾದಿಗಳಿಂದ ಭಾರೀ ಗುಂಡಿನ ದಾಳಿಗೆ ಒಳಗಾಯಿತು. ದಾಳಿಯಲ್ಲಿ ಇನ್ಸ್ ಪೆಕ್ಟರ್ ಶ್ರೇಣಿಯ ಅಧಿಕಾರಿ ಸೇರಿದಂತೆ 25 ಸಿಬ್ಬಂದಿ ಹತ್ಯೆಗೈಯ್ಯಲ್ಪಟ್ಟಿದ್ದರು.
ಪೊಲೀಸ್ ತನಿಖೆಯನ್ನು ಪ್ರಶ್ನಿಸಿದ ನ್ಯಾಯಾಲಯ, ಬಂಧನದ ಸಮಯದಲ್ಲಿ ಆರೋಪಿಗಳಿಂದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಆದಿವಾಸಿಗಳು ಮಾವೋವಾದಿಗಳು ಹೊಂಚುದಾಳಿ ನಡೆಸಿದ ಸ್ಥಳದಲ್ಲಿ ಹಾಜರಿದ್ದರು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದೆ.