ರಾಷ್ಟ್ರಪತಿ ಚುನಾವಣೆ: ನಾಳೆ (ಜು.18) ಮತದಾನ, ವಿಧಾನಸೌಧದ ಮತಕೇಂದ್ರದಲ್ಲಿ ಸಕಲಸಿದ್ಧತೆ

ಬೆಂಗಳೂರು, ಜು. 17: ‘ರಾಷ್ಟ್ರಪತಿ ಸ್ಥಾನ'ಕ್ಕೆ ನಾಳೆ(ಜು.18) ಚುನಾವಣೆ ನಡೆಯಲಿದ್ದು, ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧದ ಮೊದಲ ಮಹಡಿಯಲ್ಲಿನ ಕೊಠಡಿ ಸಂಖ್ಯೆ-106ರಲ್ಲಿ ಕೇಂದ್ರ ಚುನಾವಣಾ ಆಯೋಗ ಸುಗಮ ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದೆ.
ಬಿಜೆಪಿ ಬೆಂಬಲಿತ ಎನ್‍ಡಿಎ ಅಭ್ಯರ್ಥಿ ದ್ರೌಪದಿಮುರ್ಮುಹಾಗೂಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಬೆಂಬಲಿತ ಅಭ್ಯರ್ಥಿ ಯಶವಂತಸಿನ್ಹಾಕಣದಲ್ಲಿದ್ದು, ನಾಳೆ ಬೆಳಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ಮತದಾನ ನಡೆಯಲಿದೆ. ರಾಜ್ಯದ ಶಾಸಕರು(ವಿಧಾನಸಭಾ ಸದಸ್ಯರು) ಹಾಗೂ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ವಿಧಾನಸೌಧದಲ್ಲಿ ಮತ ಚಲಾಯಿಸಲಿದ್ದಾರೆ.
ಆಡಳಿತರೂಢ ಬಿಜೆಪಿ ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ 224 ಮಂದಿ ವಿಧಾನಸಭೆ ಸದಸ್ಯರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದೇ ವೇಳೆ ಚಾಮರಾಜನಗರ ಕ್ಷೇತ್ರದ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ಆನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲೇ ಮತ ಚಲಾಯಿಸಲು ಲೋಕಸಭೆ ಸ್ಪೀಕರ್ ಕಚೇರಿಯಿಂದ ಅನುಮತಿ ಪಡೆದುಕೊಂಡಿದ್ದಾರೆ.
ಮತದಾನಕ್ಕೆ ಬ್ಯಾಲೆಟ್ ಪೇಪರ್ ಬಳಕೆ ಮಾಡುತ್ತಿದ್ದು, ವಿಧಾನಸಭಾ ಸದಸ್ಯರು ಚುನಾವಣಾಧಿಕಾರಿಗಳು ನೀಡುವ ನೇರಳೆ ಬಣ್ಣದ ಲೇಖನಿಯನ್ನೇ ಬಳಕೆ ಮಾಡಿ ಮತದಾನ ಮಾಡಬೇಕು. ಇತರೆ ಯಾವುದೇ ಲೇಖನಿ ಬಳಕೆ ಮಾಡಿದರೆ ಆ ಮತ ಅಸಿಂಧುವಾಗಲಿದೆ. ಶಾಸಕರು ಮತವನ್ನು ಗೌಪ್ಯವಾಗಿಡುವ ಸಲುವಾಗಿ ಮತಪತ್ರವನ್ನು ಮಡಿಚಿ ಮತಪೆಟ್ಟಿಗೆಯೊಳಗೆ ಹಾಕಬೇಕೆಂದು ಸೂಚಿಸಲಾಗಿದೆ.
ಮತದಾನಕ್ಕೆ ಅರ್ಹ ಮತದಾರರು ಮತಪತ್ರ ಪಡೆಯುವ ವೇಳೆ ಗುರುತಿನ ಚೀಟಿಯನ್ನು ಚುನಾವಣಾಧಿಕಾರಿಗೆ ನೀಡಬೇಕು. ಆ ಬಳಿಕಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ರಾಜ್ಯವನ್ನು ಪ್ರತಿನಿಧಿಸುವ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ದಿಲ್ಲಿಯಲ್ಲಿ ಮತದಾನ ಮಾಡಲಿದ್ದಾರೆ.ಮತದಾನ ಅಂತ್ಯದ ಬಳಿಕ ಮತಪತ್ರಗಳನ್ನು ನಾಳೆ ಸಂಜೆ ವಿಶೇಷ ವಿಮಾನದ ಮೂಲಕ ಭದ್ರತೆಯೊಂದಿಗೆ ದಿಲ್ಲಿಗೆ ರವಾನಿಸಲಾಗುತ್ತದೆ ಎಂದು ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರು ತಿಳಿಸಿದ್ದಾರೆ.







