ಬಂಟಕಲ್ ವಿದ್ಯಾರ್ಥಿಗಳ ತಂಡ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ

ಶಿರ್ವ, ಜು.೧೭: ಬಂಟಕಲ್ಲು ಮಧ್ವ ವಾದಿರಾಜತಾಂತ್ರಿಕ ಮಹಾ ವಿದ್ಯಾಲಯದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ರಕ್ಷಿತ್ ಆಚಾರ್ಯ, ರಕ್ಷಾ ಕೊಟ್ಟಾರಿ, ಶ್ರೇಯಾ, ಸುಮಂತ್ ಶೆಟ್ಟಿಗಾರ್, ಶೃತ ಭಟ್, ವಿಕ್ರಂ ಗಿರೀಶ್ ತುಂಗ ಪ್ರಸ್ತಾಪಿಸಿದ ಅತುಲ್ಯ-ಆನ್‌ಲೈನ್ ಜ್ಞಾನ ಮೌಲ್ಯಮಾಪನ ಎಂಬ ಯೋಜನೆಯ ಪ್ರಸ್ತಾಪನೆಯು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್- ೨೦೨೨ರ ರಾಷ್ಟ್ರ ಮಟ್ಟದ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.
ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿ ಸಹನ ಮಾರ್ಗದರ್ಶನದಲ್ಲಿ ಮಂಡಿಸಿದ ಈ ಪ್ರಸ್ತಾವನೆಯು ವಿವಿಧ ಹಂತಗಳಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಕಾರ್ಯ ಕ್ಷಮತೆಯನ್ನು ಪತ್ತೆ ಹಚ್ಚಲು ಒಂದು ಕೇಂದ್ರೀಕೃತ ವೇದಿಕೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದು ದೇಶದ ಯಾವ ಭಾಗದಲ್ಲಾದರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ. ಭಾರತ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆ ಅಂತಿಮ ಸುತ್ತು ೨೦೨೨ರ ಆಗಸ್ಟ್ ತಿಂಗಳಿನ ನಾಲ್ಕನೇ ವಾರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.





