ಬಂಟ್ವಾಳ; ನೀರು ಬಿಸಿ ಮಾಡುವ ಕಾಯಿಲ್ ನಿಂದ ವಿದ್ಯುತ್ ಆಘಾತ: ಸ್ನಾನಗೃಹದಲ್ಲಿ ವ್ಯಕ್ತಿ ಮೃತ್ಯು

ಬಂಟ್ವಾಳ : ನೀರು ಬಿಸಿ ಮಾಡುವ ವಿದ್ಯುತ್ ಕಾಯಿಲ್ ನಿಂದ ವಿದ್ಯುತ್ ಸ್ಪರ್ಷಗೊಂಡು ವ್ಯಕ್ತಿಯೊಬ್ಬರು ಸ್ನಾನಗೃಹದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಎಂಬಲ್ಲಿ ನಡೆದಿದೆ.
ಮೂಲತಃ ನೀರುಮಾರ್ಗ ನಿವಾಸಿ, ಪ್ರಸಕ್ತ ಬ್ರಹ್ಮರಕೂಟ್ಲು ಚಂದ್ರಿಗೆಯ ಪರಿಯೋಡಿಬೀಡು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಹೇಮಚಂದ್ರ (49) ಮೃತರು.
ಹೇಮಚಂದ್ರ ಅವರ ಪತ್ನಿಯ ಮನೆ ಚಂದ್ರಿಗೆಯಲ್ಲಿದ್ದು ಅಲ್ಲೇ ಸಮೀಪ ಪೆರಿಯೋಡಿಬೀಡು ಎಂಬಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬ ವಾಸವಿದೆ.
ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಹೇಮಚಂದ್ರ ಸ್ನಾನ ಮಾಡಲು ಸ್ನಾನಗೃಹಕ್ಕೆ ತೆರಳಿದ್ದು ಸುಮಾರು ಹೊತ್ತು ಕಳೆದರೂ ಹೊರಗೆ ಬಾರದಿರುವುದರಿಂದ ಬಾಗಿಲು ಮುರಿದು ನೋಡಿದಾಗ ಅವರು ಮೃತಪಟ್ಟ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ.
ಬಕೆಟ್ ಗೆ ಬಿಸಿನೀರು ಕಾಯಿಸುವ ವಿದ್ಯುತ್ ಕಾಯಿಲ್ ಹಾಕಿ ಸ್ವಿಚ್ ಆನ್ ಮಾಡಲಾಗಿತ್ತು. ಮೃತದೇಹದ ಕೈ ಬಕೆಟ್ ನಲ್ಲಿತ್ತು ಎನ್ನಲಾಗಿದ್ದು ವಿದ್ಯುತ್ ಅಪಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬಂಟ್ವಾಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.







