ಕೋಟೇಶ್ವರ ಹಳಅಳಿವೆಯಲ್ಲಿ ತೀವ್ರ ಕಡಲ್ಕೊರೆತ; ತೀರ ನಿವಾಸಿಗಳಲ್ಲಿ ಆತಂಕ
ಸಮುದ್ರ ಪಾಲಾದ ತಡೆಗೋಡೆ ಕಲ್ಲುಗಳು

ಕುಂದಾಪುರ: ಕೋಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳಅಳಿವೆ ಸಮೀಪದ ಕಡಲ್ಕೊರೆತ ತೀವೃಗೊಂಡಿದ್ದು, ತಡೆಗೋಡೆ ಕಲ್ಲುಗಳು ಸಮುದ್ರ ಪಾಲಾಗಿವೆ. ಇಲ್ಲಿನ ಪ್ರಮುಖ ರಸ್ತೆ ಕೂಡ ಕೊಚ್ಚಿ ಹೋಗುವ ಭೀತಿ ಎದುರಾಗಿದೆ.
ಹಳಅಳಿವೆ ಬಳಿಯ ಕಿನಾರ ಬೀಚ್ ರೆಸ್ಟೋರೆಂಟ್ ಹಾಗೂ ಗೋಪಾಡಿ ಮನೆ ಪರಿಸರದಲ್ಲಿ ಕಡಲಿನ ಅಬ್ಬರ ಹೆಚ್ಚಾಗಿದ್ದು, ಬೃಹತ್ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇದರಿಂದ ರೆಸ್ಟೋರೆಂಟ್ ಗುಡಿಸಲುಗಳು ಧರೆಗುರುಳಿವೆ. ಅಲ್ಲದೆ ಈ ಭಾಗದ ಪ್ರಮುಖ ಸಂಪರ್ಕಕೊಂಡಿ ಕೋಡಿ-ಕೋಟೇಶ್ವರ ರಸ್ತೆಯು ಕೂಡ ಅಪಾಯದ ಸ್ಥಿತಿಯಲ್ಲಿದೆ.
ಕಡಲ್ಕೊರೆತದ ಪರಿಣಾಮದಿಂದ ಹಳಅಳಿವೆ ಕಡಲ ತೀರದಲ್ಲಿ ತಡೆಗೋಡೆ ಗಳಿಗೆ ಹಾಕಲಾದ ಬೃಹತ್ ಗಾತ್ರದ ಕಲ್ಲುಗಳು ಸಮುದ್ರ ಪಾಲಾಗಿವೆ. ಗಾಳಿ ಮಳೆಯಿಂದ ಸಮೀಪದಲ್ಲಿರುವ ಗೂಡಂಗಡಿಗಳಿಗೆ ಕಡಲಿನ ಅಲೆಗಳ ನೀರು ಹೊಡೆಯುತ್ತಿದ್ದು, ಅಂಗಡಿ ಮಾಲಕರು ವ್ಯಾಪಾರ ಮಾಡುವುದಕ್ಕೂ ಭಯ ಪಡು ವಂತಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಕಡಲ್ಕೊರೆತ ಸಮಸ್ಯೆ ಇಲ್ಲಿನ ಜನರನ್ನು ಹೈರಾಣಾಗಿಸಿದೆ. ಕಿನಾರ ರೆಸ್ಟೋರೆಂಟ್ ಬಳಿ ಪ್ರತಿ ಬಾರಿ ಮಳೆಗಾಲದಲ್ಲಿ ಕಡಲ ಕೊರೆತ ಕಾಣಿಸಿಕೊಳ್ಳುತ್ತದೆ. ಈಗಾಗಲೇ ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಈ ಭಾಗದ ಕಡಲ ತೀರ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಸರಕಾರ ಕ್ರಮ ವಹಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
"ಪ್ರತಿವರ್ಷ ಮಳೆಗಾಲದಲ್ಲಿ ನಮಗೆ ಇದೇ ಗೋಳು. ಕೇವಲ ಪ್ರಚಾರಕ್ಕಾಗಿ ಜನಪ್ರತಿನಿಧಿಗಳು ಬಂದು ಪೋಟೋ ಪೋಸ್ ನೀಡಿ ಹೋಗುತ್ತಾರೆ. ಇದರಿಂದ ಯಾವುದೇ ಪ್ರಯೋಜನಗಳು ನಮಗಿಲ್ಲ. ಚುನಾವಣೆ ಬಂದಾಗ ಮಾತ್ರ ಎಲ್ಲಾ ಜನಪ್ರತಿನಿಧಿಗಳು ಬಂದು ವೋಟು ಕೇಳುತ್ತಾರೆ. ಇಲ್ಲಿನ ಶಾಶ್ವತ ಸಮಸ್ಯೆಗೆ ಪರಿಹಾರ ನೀಡುವ ಯೋಜನೆಗಳು ಮಾತ್ರ ಕಾರ್ಯರೂಪಕ್ಕೆ ಬಂದಿಲ್ಲ".
-ಕೃಷ್ಣ ಪೂಜಾರಿ, ಮಾಜಿ ಸದಸ್ಯರು, ಗ್ರಾಮ ಪಂಚಾಯತ್







