ವಿದ್ಯುತ್ ಗುತ್ತಿಗೆದಾರರಿಗೆ ಸರಕಾರದಿಂದ ನೆರವು: ಸಚಿವ ಸುನೀಲ್‍ಕುಮಾರ್

ಬೆಂಗಳೂರು, ಜು.17: ರಾಜ್ಯದ ವಿದ್ಯುತ್ ಗುತ್ತಿಗೆದಾರರಿಗೆ ನಮ್ಮ ಸರಕಾರ ನೆರವು ನೀಡಲಿದೆ ಹಾಗೂ ಇಂಧನ ಇಲಾಖೆಯನ್ನು ಕಳೆದ ಒಂದು ವರ್ಷದಿಂದ ಸುಧಾರಣೆ ಮಾಡಲಾಗಿದೆ ಎಂದು ಇಂಧನ ಸಚಿವ ಸುನೀಲ್‍ಕುಮಾರ್ ಹೇಳಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಮಾವೇಶ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗುತ್ತಿಗೆದಾರರ ಸಹಕಾರದಿಂದ ಇಂಧನ ಇಲಾಖೆ ಯಶ್ವಸಿಯತ್ತ ಸಾಗುತ್ತಿದೆ. ಸಾಮಾನ್ಯ ಕಾರ್ಯಕರ್ತ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ಒಟ್ಟಾಗಿ ರಾಜ್ಯ ಮತ್ತು ಇಲಾಖೆಗೆ ಹೆಸರು ಬರುವಂತೆ ಕೆಲಸ ಮಾಡೋಣ. ನೂರು ದಿನ ವಿಶೇಷ ಯೋಜನೆ ಕಾರ್ಯಕ್ರಮದಲ್ಲಿ ಬೆಳಕು ಯೋಜನೆ ವಿದ್ಯುತ್ ಇಲ್ಲದ ಮನೆಗಳಲ್ಲಿ ಸಂಪರ್ಕ ನೀಡಲು ಪಂಚಾಯಿತಿ ಅನುಮತಿ ಕಡ್ಡಾಯವಲ್ಲ ಎಂದು ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ ಸಿ.ರಮೇಶ್ ಮಾತನಾಡಿ, ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘವು 100 ವರ್ಷಗಳ ಇತಿಹಾಸವಿದೆ. ವಿದ್ಯುತ್ ಗುತ್ತಿಗೆದಾರರ ಸಂಕಷ್ಟ, ಸಮಸ್ಯೆಗಳಿಗೆ ಸಂಘವು ಸದಾಕಾಲ ಶ್ರಮಿಸುತ್ತಿದೆ. 2022ರ ಸಾಲಿನಲ್ಲಿ ವಾಸ ದೃಡೀಕರಣ ಇಲ್ಲದಿದ್ದರು ವಿದ್ಯುತ್ ಸಂಪರ್ಕ ಕೊಡಬೇಕು ಎಂದು ರಾಜ್ಯ ಸರಕಾರದ ಆದೇಶದಿಂದ ಲಕ್ಷಾಂತರ ಜನರ ಬಾಳಿಗೆ ಬೆಳಕು ನೀಡಿದೆ. ಅದರಿಂದ ನಮ್ಮ ಸಂಘದ ಮುಖ್ಯಮಂತ್ರಿಗಳಿಗೆ ಇಂಧನ ಸಚಿವರಿಗೆ ಅಭಿನಂದನೆಗಳು ಎಂದರು.
ರಾಜ್ಯದಲ್ಲಿ 30 ಸಾವಿರ ವಿದ್ಯುತ್ ಗುತ್ತಿಗೆದಾರರು ಇದ್ದು ಅವರನ್ನ ನಂಬಿಕೊಂಡು 10 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. 1 ಲಕ್ಷದಿಂದ 5 ಲಕ್ಷದವರಗೆ ತುಂಡು ಗುತ್ತಿಗೆ ನೀಡಬೇಕು ಮತ್ತು ಪ್ಯಾಕೇಜ್ ಮಾಡುವುದರಿಂದ ಸಣ್ಣಮಟ್ಟದ ವಿದ್ಯುತ್ ಗುತ್ತಿಗೆದಾರರು ಬೀದಿ ಪಾಲಾಗುತ್ತಾರೆ ಇದರ ಬಗ್ಗೆ ಸರಕಾರ ಗಮನ ಹರಿಸಬೇಕು. ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಸಾಮಾಜಿಕ ಸೇವೆ ಗುರುತಿಸಿ, ನಮ್ಮ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಹೇಳಿದರು. ಇಂಧನ ಸಚಿವ ಸುನೀಲ್ ಕುಮಾರ್‍ರವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪದಾಧಿಕಾರಿಗಳಾದ ಎಂ.ಎನ್.ರಮೇಶ್, ಚಂದ್ರಬಾಬು, ಶಿವಾನಂದ್ ಬಾಲಪ್ಪನವರ್, ಚಂದ್ರಬಾಬು ಉಪಸ್ಥಿತರಿದ್ದರು.







