ಚೀನಾದಲ್ಲಿನ ಇಸ್ಲಾಂ ಧರ್ಮ ಚೀನೀ ದೃಷ್ಟಿಕೋನದಂತಿರಬೇಕು: ಅಧ್ಯಕ್ಷ ಕ್ಸಿ ಜಿಂಪಿಂಗ್

Photo : PTI
ಬೀಜಿಂಗ್, ಜು.17: ಚೀನಾದಲ್ಲಿ ಇಸ್ಲಾಂ ಧರ್ಮವು ಚೀನಾದ ದೃಷ್ಟಿಕೋನಕ್ಕೆ ಬದ್ಧವಾಗಿರಬೇಕು ಮತ್ತು ದೇಶದಲ್ಲಿನ ಧರ್ಮವು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಅನುಸರಿಸುತ್ತಿರುವ ಸಮಾಜವಾದಿ ಸಮಾಜಕ್ಕೆ ಹೊಂದಿಕೊಳ್ಳಬೇಕು ಎಂಬ ತತ್ವವನ್ನು ಎತ್ತಿಹಿಡಿಯುವಂತೆ ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಕ್ಸಿನ್ಜಿಯಾಂಗ್ ವಲಯದಲ್ಲಿ ಪ್ರಾಂತದ ಹೊರಗಿನವರಾದ ಹ್ಯಾನ್ ಚೀನೀಯರನ್ನು ನೆಲೆಗೊಳಿಸುವ ಸರಕಾರದ ಪ್ರಯತ್ನಗಳನ್ನು ವಿರೋಧಿಸಿ ಉಯಿಗರ್ ಮುಸ್ಲಿಮರು ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಚೀನಾದ ಸೇನೆ ಬಲಪ್ರಯೋಗಿಸಿದ ಬಳಿಕ ಉದ್ವಿಗ್ನತೆ ನೆಲೆಸಿದ್ದು ಈ ವಲಯಕ್ಕೆ ಕ್ಸಿ ಜಿಂಪಿಂಗ್ 4 ದಿನಗಳ ಭೇಟಿ ನೀಡಿದ್ದಾರೆ.
ಅಲ್ಲಿ ಅಧಿಕಾರಿಗಳ ಸಭೆ ನಡೆಸಿದ ಕ್ಸಿ, ಚೀನೀ ರಾಷ್ಟ್ರಕ್ಕಾಗಿ ಸಮುದಾಯದ ಬಲವಾದ ಪ್ರಜ್ಞೆಯನ್ನು ಬೆಳೆಸುವುದು, ವಿವಿಧ ಜನಾಂಗೀಯ ಗುಂಪುಗಳ ನಡುವೆ ವಿನಿಮಯ, ಸಂವಹನ ಮತ್ತು ಏಕತೆಯನ್ನು ಉತ್ತೇಜಿಸಲು ಒತ್ತಿಹೇಳಿದರು ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ಧಾರ್ಮಿಕ ವ್ಯವಹಾರಗಳ ಆಡಳಿತ ಸಾಮರ್ಥ್ಯವನ್ನು ಸುಧಾರಿಸುವ ಮತ್ತು ಧರ್ಮಗಳ ಆರೋಗ್ಯಕರ ಬೆಳವಣಿಗೆಯನ್ನು ಅರಿತುಕೊಳ್ಳುವ ಅಗತ್ಯವನ್ನು ಒತ್ತಿಹೇಳಿದ ಅವರು, ಜನರ ಸಾಮಾನ್ಯ ಧಾರ್ಮಿಕ ಅಗತ್ಯಗಳನ್ನು ಖಾತರಿಪಡಿಸಬೇಕು ಮತ್ತು ಅವರು ಸರಕಾರ ಮತ್ತು ಪಕ್ಷದ ಜತೆ ನಿಕಟ ಸಂಪರ್ಕ ಬೆಳೆಸಿಕೊಳ್ಳಬೇಕು ಎಂದರು.
ಸಾಂಸ್ಕೃತಿಕ ಗುರುತಿನ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ಎಲ್ಲಾ ಜನಾಂಗೀಯ ಗುಂಪುಗಳ ಜನರಿಗೆ ಶಿಕ್ಷಣ ಮತ್ತು ಮಾರ್ಗದರ್ಶನ ನೀಡುವಂತೆ ಕರೆ ನೀಡಿದರು. ಮಾತೃಭೂಮಿ, ಚೀನಾ ರಾಷ್ಟ್ರ, ಚೀನೀ ಸಂಸ್ಕೃತಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ, ಮತ್ತು ಚೀನೀ ಗುಣಲಕ್ಷಣದೊಂದಿಗೆ ಸಮಾಜವಾದದೊಂದಿಗೆ ತಮ್ಮ ಗುರುತನ್ನು ಬಲಪಡಿಸುವ ಅಗತ್ಯವಿದೆ ಎಂದು ಜಿಂಪಿಂಗ್ ಹೇಳಿದರು. ಕಳೆದ ಕೆಲವು ವರ್ಷಗಳಿಂದ ಜಿಂಪಿಂಗ್ ಇಸ್ಲಾಂ ಧರ್ಮದ ಸಿನಿಕೀಕರಣವನ್ನು , ಅಂದರೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ನೀತಿಯ ಪ್ರಭಾವದಡಿ ಅದನ್ನು ತರುವ ಬಗ್ಗೆ ಪ್ರತಿಪಾದಿಸುತ್ತಿದ್ದಾರೆ. ಚೀನಾದ ಶಿಬಿರಗಳಲ್ಲಿ ಉಯಿಗರ್ ಮುಸ್ಲಿಮರ ಸಾಮೂಹಿಕ ಸೆರೆವಾಸಗಳ ಆರೋಪವಿದೆ. ಆದರೆ ಈ ಶಿಬಿರಗಳು ಶಿಕ್ಷಣ ಕೇಂದ್ರಗಳು ಎಂದು ಚೀನಾ ಪ್ರತಿಪಾದಿಸುತ್ತಿದೆ.







