ಉಡುಪಿ; ಟ್ರಾವೆಲಿಂಗ್ ಏಜೆನ್ಸಿಯ ಐಡಿ ಕಳವು ಮಾಡಿ ಲಕ್ಷಾಂತರ ರೂ. ವಂಚನೆ: ದೂರು
ಉಡುಪಿ : ಟ್ರಾವೆಲಿಂಗ್ ಸಂಸ್ಥೆಯ ಐಡಿ ಕಳವು ಮಾಡಿ, ಪಾಸ್ವಾರ್ಡ್ ರಿಸೆಟ್ ಮಾಡಿಕೊಂಡು ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ಕುಕ್ಕುಂದೂರು ಬಂಗ್ಲೆಗುಡ್ಡೆಯ ರುಡಾಲ್ಫ್ ಡಿಸೋಜ(44) ಎಂಬವರು ೨೦೧೮-೧೯ನೆ ಸಾಲಿನ ಟಿಬಿಓ ಟಾಕ್ ಕಂಪೆನಿಯ ಸ್ಕೈಲೈನ್ ಎಂಟರ್ ಪ್ರೈಸಸ್ ಮತ್ತು ಟ್ರಾವೆಲ್ಸ್‌ನಲ್ಲಿ ವಿಮಾನ, ರೈಲು ಟಿಕೆಟ್ ಬುಕ್ ಮಾಡುವ ಫ್ರಾಂಚೈಸಿ ಪಡೆದುಕೊಂಡಿದ್ದು, ಈ ಸಂಸ್ಥೆಯಿಂದ ಯೂಸರ್ ಐಡಿ ಯನ್ನು ಹೊಂದಿದ್ದರು.
೨೦೨೨ರ ಎಪ್ರಿಲ್ ತಿಂಗಳಿನ ಕೊನೆಯಲ್ಲಿ ಟಿಬಿಓ ಕಂಪೆನಿಯಿಂದ ರುಡಾಲ್ಫ್ ಡಿಸೋಜಾರಿಗೆ ಕರೆ ಬಂದಿದ್ದು, ನಿಮ್ಮ ಐಡಿಗೆ 14,76,284 ರೂ. ಪಾವತಿಸಲಾಗಿದೆ. ಅದನ್ನು ಕೂಡಲೇ ಮರುಪಾವತಿ ಮಾಡುವಂತೆ ತಿಳಿಸ ಲಾಗಿತ್ತು. ಆದರೆ ರುಡಾಲ್ಫ್ ಕಳೆದ ಎರಡು ವರ್ಷಗಳಿಂದ ಈ ಐಡಿಯನ್ನು ಬಳಸಿರುವುದಿಲ್ಲ. ಇವರ ಸಂಸ್ಥೆಯಲ್ಲಿ ಸೆಲ್ಸ್ ಮ್ಯಾನ್ ಆಗಿ ಕೆಲಸ ಮಾಡುವ ವ್ಯಕ್ತಿ ರುಡಾಲ್ಫ್‌ರ ಐಡಿಯನ್ನು ಕಳವು ಮಾಡಿ, ಇನ್ನೋರ್ವನ ಮೂಲಕ ಕಂಪೆನಿಯಿಂದ ಈ ಐಡಿಯ ಪಾಸ್‌ವರ್ಡ್ ರಿಸೆಟ್ ಮಾಡಿಸಿಕೊಂಡಿದ್ದನು ಎಂದು ದೂರಲಾಗಿದೆ.
ರುಡಾಲ್ಫ್ ಅವರೇ ಐಡಿಯನ್ನು ಬಳಸುತ್ತಿರುವಂತೆ ಆರೋಪಿ ಬಿಂಬಿಸಿ, ಕಂಪೆನಿಯಿಂದ ಬಂದಿರುವ ಹಣವನ್ನು ಟಿಕೆಟ್ ಬುಕ್ಕಿಂಗ್ ಖರ್ಚು ಮಾಡಿ, ಹಣ ಮರುಪಾವತಿಸದೇ ಕಂಪೆನಿಗೆ ಹಾಗೂ ರುಡಾಲ್ಫ್ ಡಿಸೋಜಗೆ ನಷ್ಟ ಉಂಟು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.