ಶ್ರೀಲಂಕಾ: ಶತದಿನ ಪೂರೈಸಿದ ಪ್ರತಿಭಟನಾ ಚಳುವಳಿ
ಕೊಲಂಬೊ, ಜು.17: ಓರ್ವ ಅಧ್ಯಕ್ಷರನ್ನು ಪದಚ್ಯುತಗೊಳಿಸಿದ ಬಳಿಕ ಈಗ ಅವರ ಉತ್ತರಾಧಿಕಾರಿಯತ್ತ ದೃಷ್ಟಿ ನೆಟ್ಟಿರುವ ಶ್ರೀಲಂಕಾದ ಪ್ರತಿಭಟನಾ ಚಳವಳಿ ರವಿವಾರ ನೂರನೇ ದಿನಕ್ಕೆ ಕಾಲಿರಿಸಿದೆ. ಈ ಮಧ್ಯೆ, ದ್ವೀಪರಾಷ್ಟ್ರದ ಅರ್ಥವ್ಯವಸ್ಥೆ ಮತ್ತಷ್ಟು ಅಧೋಗತಿಯತ್ತ ಸಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶ್ರೀಲಂಕಾ ದೇಶಕ್ಕೆ ಎದುರಾಗಿರುವ ಕಂಡು ಕೇಳರಿಯದ ಆರ್ಥಿಕ ಬಿಕ್ಕಟ್ಟಿಗೆ ಅಧ್ಯಕ್ಷರಾಗಿದ್ದ ಗೊತಬಯ ರಾಜಪಕ್ಸ ಅವರ ತಪ್ಪುನಿರ್ವಹಣೆ ಪ್ರಧಾನ ಕಾರಣ ಎಂದು ದೂಷಿಸಲಾಗಿದೆ. ಇದರಿಂದ ದೇಶದ 22 ಮಿಲಿಯನ್ ಜನರಿಗೆ ಕಳೆದ ವರ್ಷಾಂತ್ಯದಿಂದ ಆಹಾರ, ಇಂಧನ ಮತ್ತು ಔಷಧದ ತೀವ್ರ ಕೊರತೆ ಎದುರಾಗಿದೆ. ದೈನಂದಿನ ಬಳಕೆಯ ವಸ್ತುಗಳ ತೀವ್ರ ಕೊರತೆ ಎದುರಾದಾಗ ಸಹನೆ ಕಳೆದುಕೊಂಡ ಜನತೆ ಸರಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದರು.
ಆರಂಭದಲ್ಲಿ ಫೇಸ್ಬುಕ್, ಟ್ವಿಟರ್, ಟಿಕ್ಟಾಕ್ ಮುಂತಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹೇಳಿಕೆಗಳನ್ನು ಪೋಸ್ಟ್ ಮಾಡುವ ಮೂಲಕ ಆರಂಭವಾದ ಪ್ರತಿಭಟನಾ ಚಳವಳಿ ಬಳಿಕ ದೇಶದಾದ್ಯಂತದ ಜನರನ್ನು ಒಂದೇ ಧ್ಯೇಯದಡಿ ಒಟ್ಟುಗೂಡಿಸಿ ಬೀದಿಗಿಳಿದು ಪ್ರತಿಭಟನೆಗೆ ನಾಂದಿ ಹಾಡಿತು. ಆರ್ಥಿಕ ಸಂಕಷ್ಟಗಳಿಂದ ರೋಸಿ ಹೋಗಿ ಒಗ್ಗೂಡಿದ ಅಲ್ಪಸಂಖ್ಯಾತ ತಮಿಳರು ಮತ್ತು ಮುಸ್ಲಿಮರು ಬಹುಸಂಖ್ಯಾತ ಸಿಂಹಳೀಯರೊಂದಿಗೆ ಸೇರಿಕೊಂಡು ಒಂದೊಮ್ಮೆ ಅತ್ಯಂತ ಪ್ರಭಾವೀ ಮತ್ತು ಪ್ರಬಲವಾಗಿದ್ದ ರಾಜಪಕ್ಸ ವಂಶವನ್ನು ಅಧಿಕಾರದಿಂದ ಹೊರಗಿಡುವ ಪಣತೊಟ್ಟರು.
ಎಪ್ರಿಲ್ 19ರಂದು ಕೊಲಂಬೊದಲ್ಲಿರುವ ರಾಜಪಕ್ಸರ ಕಚೇರಿಯೆದುರು 2 ದಿನದ ಪ್ರತಿಭಟನೆ ನಡೆಯಿತು. ಪ್ರತಿಭಟನೆಗೆ ನಿರೀಕ್ಷೆಗೂ ಮೀರಿ ಬೃಹತ್ ಸಂಖ್ಯೆಯಲ್ಲಿ ಜನ ಸೇರಿದಾಗ ಪ್ರತಿಭಟನೆಯನ್ನು ಮುಂದುವರಿಸಲು ಆಯೋಜಕರು ನಿರ್ಧರಿಸಿದರು. ಪ್ರತಿಭಟನೆಯ ಬಿಸಿ ಏರುತ್ತಿದ್ದಂತೆಯೇ ಗೊತಬಯ ಅವರ ಹಿರಿಯ ಸಹೋದರ ಮಹಿಂದಾ ರಾಜಪಕ್ಸ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ಅವರ ಸ್ಥಾನಕ್ಕೆ ಮಾಜಿ ಪ್ರಧಾನಿ ರಣಿಲ್ ವಿಕ್ರಮಸಿಂಘೆಯನ್ನು ಗೊತಬಯ ಘೋಷಿಸಿದರು.
6ನೇ ಬಾರಿ ಪ್ರಧಾನಿ ಹುದ್ದೆಗೇರಿದ ವಿಕ್ರಮಸಿಂಘೆ ತಮ್ಮ ಪಕ್ಷದಿಂದ ಗೆದ್ದುಬಂದ ಏಕೈಕ ಪ್ರತಿನಿಧಿಯಾಗಿದ್ದಾರೆ. ಇದರ ಜತೆಗೆ ಸಚಿವ ಸಂಪುಟದಲ್ಲಿದ್ದ ಗೊತಬಯ ಅವರ 3 ಸಂಬಂಧಿಕರೂ ರಾಜೀನಾಮೆ ಘೋಷಿಸಿದರು. ಆದರೆ ಇದರಿಂದ ಪ್ರತಿಭಟನಾಕಾರರ ಆಕ್ರೋಶ ತಣಿಯಲಿಲ್ಲ. ಜುಲೈ 9ರಂದು ಅಧ್ಯಕ್ಷ ಗೊತಬಯ ರಾಜಪಕ್ಸ ಅವರ ಸರಕಾರಿ ನಿವಾಸಕ್ಕೆ ಮುತ್ತಿಗೆ ಹಾಕಿದರು ಮತ್ತು ಪ್ರಧಾನಿ ವಿಕ್ರಮಸಿಂಘೆಯ ಮನೆಗೂ ಬೆಂಕಿ ಹಚ್ಚಿದರು. ಪ್ರತಿಭಟನೆ ತೀವ್ರಗೊಳ್ಳುವ ಸೂಚನೆ ಪಡೆದಿದ್ದ ಗೊತಬಯ ದೇಶದಿಂದ ಪರಾರಿಯಾಗಿ ಜುಲೈ 15ರಂದು ರಾಜೀನಾಮೆ ಘೋಷಿಸಿದರು.
ಶ್ರೀಲಂಕಾದ ಸಂವಿಧಾನದಂತೆ, ಪ್ರಧಾನಿಯಾಗಿರುವ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡರು. ಇದೀಗ ನೂತನ ಅಧ್ಯಕ್ಷರ ಆಯ್ಕೆಗೆ ಜುಲೈ 20ರಂದು ಸಂಸತ್ನಲ್ಲಿ ಚುನಾವಣೆ ನಡೆಯಲಿದ್ದು, 225 ಸದಸ್ಯ ಬಲದ ಸಂಸತ್ತಿನಲ್ಲಿ 100ಕ್ಕೂ ಅಧಿಕ ಸಂಸದರಿರುವ ಗೊತಬಯ ಅವರ ಎಸ್ಎಲ್ಪಿಪಿ ಪಕ್ಷ ವಿಕ್ರಮಸಿಂಘೆಗೆ ಬೆಂಬಲ ಘೋಷಿಸಿರುವುದರಿಂದ ಅವರ ಆಯ್ಕೆ ಬಹುತೇಕ ಖಚಿತವಾಗಿದೆ.
ವಿಕ್ರಮಸಿಂಘೆ ವಿರುದ್ಧ ಪ್ರತಿಭಟನೆಗೆ ಸಜ್ಜು
ಗೊತಬಯ ದುರಾಡಳಿತವನ್ನು ಕೊನೆಗೊಳಿಸುವ ಹೋರಾಟದಲ್ಲಿ ಒಗ್ಗೂಡಿದ್ದ ತಂಡಗಳ ಜತೆ ಸಮಾಲೋಚನೆ ನಡೆಸುತ್ತಿದ್ದು ಹಂಗಾಮಿ ಅಧ್ಯಕ್ಷ ವಿಕ್ರಮಸಿಂಘೆ ವಿರುದ್ಧ ಪ್ರತಿಭಟನೆ ಮುಂದುವರಿಸಲು ಸಜ್ಜಾಗಲಿದ್ದೇವೆ ಎಂದು ಪ್ರತಿಭಟನಾಕಾರರ ವಕ್ತಾರರನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ. ರಣಿಲ್ ವಿಕ್ರಮಸಿಂಘೆ ರಾಜಪಕ್ಸ ಕುಟುಂಬದ ಮಿತ್ರನಾಗಿದ್ದು ಅವರ ಪಕ್ಷದ ಬೆಂಬಲದಿಂದ ಆಯ್ಕೆಯಾಗಲಿದ್ದಾರೆ. ಈ ಮೂಲಕ ಮತ್ತೆ ಆಡಳಿತದ ಚುಕ್ಕಾಣಿ ಗೊತಬಯ ಕೈಸೇರಲಿದೆ. ಆದ್ದರಿಂದ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ವಿಕ್ರಮಸಿಂಘೆ ತೊಲಗುವ ವರೆಗೆ ನಾವು ವಿರಮಿಸುವುದಿಲ್ಲ. ‘ಗೋ ಹೋಮ್ ರಣಿಲ್’ ಎಂಬುದು ಮುಂದಿನ ಹೋರಾಟದ ಘೋಷವಾಕ್ಯವಾಗಲಿದೆ ಎಂದವರು ಹೇಳಿದ್ದಾರೆ.