ಖಶೋಗಿ ಹತ್ಯೆ ಪ್ರಕರಣ: ಸೌದಿ ಸಚಿವರ ಹೇಳಿಕೆ ತಪ್ಪು ಎಂದ ಜೋ ಬೈಡನ್
ರಿಯಾದ್, ಜು.17: ಉಭಯ ದೇಶಗಳ ನಡುವಿನ ಪ್ರಮುಖ ವಿವಾದವಾದ ಪತ್ರಕರ್ತ ಜಮಾಲ್ ಖಶೋಗಿ ಅವರ 2018ರ ಹತ್ಯೆ ಪ್ರಕರಣದ ಬಗ್ಗೆ ದ್ವಿಪಕ್ಷೀಯ ಶೃಂಗಸಭೆಯ ಚರ್ಚೆಯಲ್ಲಿ ಶನಿವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೌದಿ ಅರೆಬಿಯಾದೊಂದಿಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಖಶೋಗಿ ಹತ್ಯೆ ಪ್ರಕರಣದಲ್ಲಿ ಬೈಡನ್ ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ರನ್ನು ದೂಷಿಸಿಲ್ಲ ಎಂದು ಸೌದಿಯ ವಿದೇಶಾಂಗ ಸಚಿವರು ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಸೌದಿಗೆ ಆಗಮಿಸಿದ ಬೈಡನ್ ರನ್ನು ಭೇಟಿಯಾದ ಪತ್ರಕರ್ತರು ಸೌದಿಯ ವಿದೇಶಾಂಗ ಸಚಿವರ ಹೇಳಿಕೆ ಸತ್ಯವೇ ಎಂದು ಕೇಳಿದಾಗ ‘ಇಲ್ಲ’ ಎಂದು ಬೈಡನ್ ಉತ್ತರಿಸಿದ್ದಾರೆ. ಖಶೋಗಿಯ ಹತ್ಯೆಗೆ ಸೌದಿಯ ಯುವರಾಜ ಆದೇಶಿಸಿದ್ದರು ಎಂದು ಅಮೆರಿಕದ ಗುಪ್ತಚರ ಏಜೆನ್ಸಿ ಹೇಳಿದೆ. ಆದರೆ ಇದನ್ನು ಸೌದಿ ಯುವರಾಜರು ನಿರಾಕರಿಸಿದ್ದಾರೆ. ಫಾಕ್ಸ್ ನ್ಯೂಸ್ ಜತೆ ಮಾತನಾಡಿದ ಸೌದಿಯ ವಿದೇಶಾಂಗ ಸಚಿವರು, ‘ಖಶೋಗಿ ಹತ್ಯೆಯಂತಹ ಪ್ರಮಾದ ಪುನರಾವರ್ತನೆಯಾಗದಂತೆ ಸೌದಿ ಕ್ರಮ ಕೈಗೊಂಡಿದೆ. ಅಮೆರಿಕವೂ ತಪ್ಪೆಸಗಿದೆ’ ಎಂದು ಯುವರಾಜರು ಬೈಡನ್ಗೆ ಸ್ಪಷ್ಟಪಡಿಸಿದರು. ಆ ಸಂದರ್ಭ ಬೈಡನ್ ಯುವರಾಜರನ್ನು ದೂಷಿಸಲಿಲ್ಲ’ ಎಂದಿದ್ದರು.