ಭಾಷಣದ ಸಂದರ್ಭ ಬಾಯ್ತಪ್ಪಿ ʼಅಮೆರಿಕದ ಸೇನೆಯ ಸ್ವಾರ್ಥತೆʼ ಎಂದ ಬೈಡನ್
ರಿಯಾದ್, ಜು.17: ಮಧ್ಯಪ್ರಾಚ್ಯ ದೇಶಗಳ ಪ್ರವಾಸದ ಅಂತಿಮ ದಿನ ಶನಿವಾರ ಸೌದಿಯ ಜೆದ್ದಾದಲ್ಲಿ ಭಾಷಣ ಮಾಡುವ ಸಂದರ್ಭ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಮೆರಿಕ ಸೇನೆಯ ನಿಸ್ವಾರ್ಥತೆ ಎನ್ನುವ ಬದಲು ಬಾಯ್ತಪ್ಪಿ ಅಮೆರಿಕ ಸೇನೆಯ ಸ್ವಾರ್ಥತೆ ಎಂದು ಹೇಳಿ ಮುಜುಗುರಕ್ಕೆ ಒಳಗಾದರು ಎಂದು ವರದಿಯಾಗಿದೆ.
ಗಲ್ಫ್ ಸಹಕಾರ ಮಂಡಳಿಯ ಸಭೆಯನ್ನುದ್ದೇಶಿಸಿ ಬೈಡನ್ ಸಿದ್ಧಪಡಿಸಿಕೊಂಡಿದ್ದ ಭಾಷಣವನ್ನು ಓದಿ ಹೇಳುತ್ತಿದ್ದರು.‘ 9/11ರ ಬಳಿಕ ಇದೇ ಪ್ರಥಮ ಬಾರಿಗೆ ಅಮೆರಿಕದ ಪಡೆಗಳು ಯುದ್ಧದಲ್ಲಿ ತೊಡಗಿಲ್ಲದ ಸಂದರ್ಭ ಅಮೆರಿಕದ ಅಧ್ಯಕ್ಷರೊಬ್ಬರು ಈ ವಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಪ್ರದೇಶದಲ್ಲಿ ಯುದ್ಧದ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿದ, ನನ್ನ ಪುತ್ರ ಮೇಜರ್ ಬ್ಯೂ ಬೈಡನ್ ಸೇರಿದಂತೆ ನಮ್ಮ ಯೋಧರ ಶೌರ್ಯ ಮತ್ತು ಸ್ವಾರ್ಥತೆ, ಅಲ್ಲಲ್ಲ, ನಿಸ್ವಾರ್ಥತೆಯನ್ನು ನಾವು ಗೌರವಿಸುತ್ತೇವೆ ’ ಎಂದು ಬೈಡನ್ ಹೇಳಿದರು.
ಎರಡು ದಿನದ ಹಿಂದೆಯಷ್ಟೇ ಬೈಡನ್ ಮತ್ತೊಂದು ತಪ್ಪೆಸಗಿದ್ದರು. ಭಾಷಣ ಮಾಡುವ ಸಂದರ್ಭ ‘ಹತ್ಯಾಕಾಂಡದ ಗೌರವ ಮತ್ತು ಸತ್ಯವನ್ನು ಜೀವಂತವಾಗಿಡುವುದಾಗಿ’ ಪ್ರತಿಜ್ಞೆ ಮಾಡುತ್ತೇನೆ ಎಂದಿದ್ದರು. ತಕ್ಷಣ ತನ್ನ ಮಾತನ್ನು ಸರಿಪಡಿಸಿಕೊಂಡು ‘ಹತ್ಯಾಕಾಂಡದ ಸತ್ಯ ಮತ್ತು ಭಯಾನಕತೆ’ ಎಂದು ಹೇಳಿದ್ದರು.