ಕ್ಯಾಬಿನ್‌ನಲ್ಲಿ ಸುಟ್ಟ ವಾಸನೆ : ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪಥ ಬದಲಾವಣೆ
48 ಗಂಟೆಗಳಲ್ಲಿ 3 ವಿಮಾನಗಳು ತುರ್ತು ಭೂಸ್ಪರ್ಶ

ಹೊಸದಿಲ್ಲಿ, ಜು. 17: ಕ್ಯಾಬಿನ್‌ನಲ್ಲಿ ಸುಟ್ಟ ವಾಸನೆಯನ್ನು ಗಮನಿಸಿದ ಬಳಿಕ ಕೋಝಿಕ್ಕೋಡ್‌ನಿಂದ ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪಥವನ್ನು ಶನಿವಾರ ಮಸ್ಕತ್‌ಗೆ ಬದಲಾಯಿಸಲಾಯಿತು.
‘‘ಹೊಗೆಯ ಬಗ್ಗೆ ಪರಿಶಿಲನೆ ನಡೆಸಲಾಯಿತು. ಆದರೆ, ಎಂಜಿನ್ ಅಥವಾ ಎಪಿಯನಲ್ಲಿ ಬೆಂಕಿ ಅಥವಾ ಹೊಗೆ ಕಂಡು ಬಂದಿಲ್ಲ. ತೈಲ, ಇಂಧನ, ಹೈಡ್ರೋಜನ್ ಮಾಲಿನ್ಯದ ವಾಸನೆ ಕೂಡ ಗಮನಕ್ಕೆ ಬಂದಿಲ್ಲ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 48 ಗಂಟೆಗಳಲ್ಲಿ ದೇಶಾದ್ಯಂತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆಯ 3 ವಿಮಾನಗಳು ತುರ್ತು ಭೂಸ್ಪರ್ಶ ಮಾಡಿವೆ.
ಕೊಝಿಕ್ಕೋಡ್, ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ಶುಕ್ರವಾರ ಹಾಗೂ ಶನಿವಾರ ಮೂರು ವಿಮಾನಗಳು ತುರ್ತು ಭೂಸ್ಪರ್ಶ ಮಾಡಿವೆ ಎಂದು ನಾಗರಿಕ ವಾಯು ಯಾನ ಪ್ರಧಾನ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ವಿಮಾನಗಳು ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿವೆ ಎಂದು ಅವರು ತಿಳಿಸಿದ್ದಾರೆ.
ಏರ್ ಅರೇಬಿಯಾ ವಿಮಾನ ಯಾನ ಸಂಸ್ಥೆಯ ಶಾರ್ಜಾದಿಂದ ಕೊಚ್ಚಿನ್‌ಗೆ ತೆರಳುತ್ತಿದ್ದ ಜಿ9-426 ವಿಮಾನದಲ್ಲಿ ಹೈಡ್ರಾಲಿಕ್ ವಿಫಲತೆಯಿಂದ ಕೊಚ್ಚಿನ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿತು.
ಜುಲೈ 16ರಂದು ನಡೆದ ಇನ್ನೊಂದು ಘಟನೆಯಲ್ಲಿ ಇಥಿಯೋಪಿಯಾ ವಿಮಾನ ಯಾನ ಸಂಸ್ಥೆಯ ಅಡ್ಡಿಸ್ ಅಬಾಬಾದಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ವಿಮಾನ ಒತ್ತಡಗೊಳಿಸುವಿಕೆಯ ಕಾರಣದಿಂದ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ಇದೇ ರೀತಿ ಮೂರನೇ ಘಟನೆ ಜುಲೈ 15ರಂದು ನಡೆದಿದ್ದು, ಶ್ರೀಲಂಕಾ ವಿಮಾನ ಯಾನ ಸಂಸ್ಥೆಯ ವಿಮಾನ ಹೈಡ್ರಾಲಿಕ್ ಸಮಸ್ಯೆಯಿಂದ ಸಂಬಂಧಿಸಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.