2023ರ ವಿಧಾನಸಭೆ ಚುನಾವಣೆಯೇ ನನ್ನ ಕೊನೆಯ ಚುನಾವಣೆ: ಸಿದ್ದರಾಮಯ್ಯ

ಮೈಸೂರು: ಬಾದಾಮಿಯಲ್ಲಿ ಮತ್ತೆ ನಿಲ್ಲುವಂತೆ ಒತ್ತಾಯ ಮಾಡುತ್ತಿದ್ದಾರೆ. ಕೋಲಾರ, ಕೊಪ್ಪಳ, ಹುಣಸೂರು ಮತ್ತು ಬೆಂಗಳೂರಿನಲ್ಲಿ ಸ್ಪರ್ಧಿಸುವಂತೆ ಒತ್ತಾಯ ಬರುತ್ತಿದೆ. ಎಲ್ಲಿ ನಿಲ್ಲಬೇಕೆಂದು ತೀರ್ಮಾನ ಮಾಡಿಲ್ಲ. ಆದರೆ, ಇದೇ ನನ್ನ ಕೊನೇ ಚುನಾವಣೆಯಾಗಿದೆ ಎಂದು ತಿಳಿಸಿದ್ದಾರೆ.
ರವಿವಾರ ನಗರದ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಭ್ರಷ್ಟ, ಕೋಮುವಾದಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಹೊರಗಿಡಬೇಕೆಂಬ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಮತ್ತೆ ಸ್ಪರ್ಧೆ ಮಾಡುವುದಿಲ್ಲ. ಯಾವ ಸ್ಥಾನಮಾನವನ್ನು ಸ್ವೀಕರಿಸುವುದಿಲ್ಲ ಎಂದರು.
ರಾಜ್ಯ ಉಳಿಯಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. 130ರಿಂದ 150 ಸ್ಥಾನ ಗೆಲ್ಲಲೇಬೇಕು. ಮೈಸೂರು 11 ಸ್ಥಾನಗಳಲ್ಲಿ 9 ಸ್ಥಾನ ಗೆಲ್ಲಬೇಕು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ತಮ್ಮ ಒಳಜಗಳ ಬಿಟ್ಟು ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.
'ಚಾಮುಂಡೇಶ್ವರಿ ಕ್ಷೇತ್ರದಲ್ಲಿ 5 ಚುನಾವಣೆಗಳಲ್ಲಿ ಗೆದ್ದಿದ್ದೇನೆ. 3ರಲ್ಲಿ ಸೋಲು ಕಂಡಿದ್ದೇನೆ. 10 ವರ್ಷ ವರುಣಾದಿಂದ ಸ್ಪರ್ಧೆ ಮಾಡಿದ್ದೆ. 2018ರಲ್ಲಿ ಮತ್ತೆ ಸ್ಪರ್ಧಿಸಿ ಸೋಲು ಕಂಡಿದ್ದೇನೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ತಾನು ಸೋಲು-ಗೆಲುವನ್ನು ಸಹಜವಾಗಿ ಸ್ವೀಕರಿಸಿದ್ದೇನೆ. ಜನರು ಆಶೀರ್ವಾದ ಮಾಡಲಿಲ್ಲ. ಸೋತಿದ್ದಕ್ಕೆ ವ್ಯಥೆ ಪಟ್ಟಿಲ್ಲ. ಬಾದಾಮಿಯಲ್ಲಿ 2 ದಿನ ಪ್ರಚಾರ ಮಾಡಿದರೂ ಜನರು ಗೆಲ್ಲಿಸಿದರು' ಎಂದರು.
'ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅನೇಕ ಬೂತ್‍ಗಳಲ್ಲಿ ಪಕ್ಷದ ಕಾರ್ಯಕರ್ತರು ಇರಲಿಲ್ಲ. ಬೂತ್ ಮಟ್ಟದ ಕಾರ್ಯಕರ್ತರು ಇಲ್ಲದ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟ. ನನಗೆ ಚಾಮುಂಡೇಶ್ವರಿ ಕ್ಷೇತ್ರದ ಮತದಾರರ ಬಗ್ಗೆ ಕೋಪ ಇಲ್ಲ. ಕಾರ್ಯಕರ್ತರ ಮೇಲೆಯೇ ಕೋಪ' ಎಂದು ನುಡಿದರು.







