ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆರೋಪ; ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಪತ್ರ

ಹೊಸದುರ್ಗ, ಜು.17: ಪಟ್ಟಣದ ಪೊಲೀಸ್ ಠಾಣೇಯಲ್ಲಿ ಶಿವಣ್ಣ ಅಲಿಯಾಸ್ ಶಿವಕುಮಾರ್ ಎಂಬುವವರನ್ನು ಲಾಕಪ್ ಡೆತ್ ಮಾಡಲಾಗಿದೆ ಎಂದು ಆರೋಪಿಸಿ ಮೈಸೂರಿನ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಎಂಬುವವರು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಜುಲೈ 2ರಂದು ಕೀರ್ತಿರಾಜ್ ಎಂಬಾತನ ಸಾವಿನ ಸಂಬಂಧ ಹೊಸದುರ್ಗ ತಾಲೂಕು ರಂಗೈನೂರು ಗ್ರಾಮದ ಶಿವಣ್ಣ ಅಲಿಯಾಸ್ ಶಿವಕುಮಾರ್ ಎಂಬುವವರನ್ನು ವಿಚಾರಣೆಗಾಗಿ ಹೊಸದುರ್ಗ ಪೊಲೀಸ್ ಠಾಣೆಯ ಪೊಲೀಸರು ಜೂನ್ 29ರ ರಾತ್ರಿ 7.30ರಿಂದ 8 ಗಂಟೆಯ ಸಮಯದಲ್ಲಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ವಿಚಾರಣೆಯ ನೆಪದಲ್ಲಿ ಶಿವಣ್ಣನವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಸ್ವಸ್ಥನಾದ ಶಿವಣ್ಣನನ್ನು ಪೊಲೀಸರು ಕೂಡಲೇ ಹೊಸದುರ್ಗದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅವರ ಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಅವರಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಿಲ್ಲ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದಾರೆ.
ಹಾಗಾಗಿ ಅವರನ್ನು ಆಂಬುಲೆನ್ಸ್‍ನಲ್ಲಿ ಆಸ್ಪತ್ರೆಗೆ ಜುಲೈ 2ರಂದು ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆದಲ್ಲಿ ಶಿವಣ್ಣ ಮೃತರಾಗಿದ್ದಾರೆ ಎಂಬ ಮಾಹಿತಿ ಬಂದಿರುತ್ತದೆ. ಆಗ ಕೂಡಲೇ ಪೊಲೀಸರು ಮೃತ ದೇಹವನ್ನು ರಂಗೈನೂರಿಗೆ ತಂದು ಸಾಕ್ಷ್ಯಾಧಾರಗಳು ಸಿಗಬಾರದೆಂಬ ದುರುದ್ದೇಶದಿಂದ ಶವವನ್ನು ಸುಟ್ಟು ಹಾಕಿದ್ದಾರೆ ಎಂಬ ಮಾಹಿತಿ ಬಂದಿರುತ್ತದೆ. ನನಗೆ ತಿಳಿದ ಮಾಹಿತಿ ಪ್ರಕಾರ ರಂಗೈನೂರು ಗ್ರಾಮದಲ್ಲಿ ಶವವನ್ನು ಹೂಳುವ ಪದ್ಧತಿ ಇದ್ದು, ಸಾಕ್ಷ್ಯಾಧಾರಗಳು ಸಿಗಬಾರದು ಎಂಬ ಕಾರಣದಿಂದ ಶಿವಣ್ಣನವರ ಮನೆಯವರ ಮೇಲೆ ಒತ್ತಡ ಹೇರಿ ಶವವನ್ನು ಸುಡುವಂತೆ ಮಾಡಿರುತ್ತಾರೆ.
ಆದ್ದರಿಂದ ಕೂಡಲೇ ಮೃತನ ಮನೆಯವರನ್ನು ಮತ್ತು ಹೊಸದುರ್ಗ ಪೊಲೀಸ್ ಠಾಣೆಯ ಪೊಲೀಸರನ್ನು ವಿಚಾರಣೆ ಮಾಡಿ, ಮೃತನ ಮತ್ತು ಹೊಸದುರ್ಗ ಪೊಲೀಸ್ ಠಾಣೆಯ ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಂಚಾರಿ ದೂರವಾಣಿಗಳಿಗೆ ಸಂಬಂಧಿಸಿದ ಜೂನ್ 29ರಿಂದ ಜುಲೈ 10ರ ವರೆಗಿನ ಕರೆಗಳ ಮತ್ತರು ಟವರ್ ಲೊಕೇಶನ್ ದಾಖಲೆಗಳನ್ನು ಠಾಣೆಯಲ್ಲಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಿಂದ ದಾಖಲಾಗಿರುವ ವಿಡಿಯೋಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸಬೇಕು. ಸತ್ಯಾಂಶವನ್ನು ತಿಳಿದುಕೊಂಡು ಶಿವಣ್ಣ ಅವರ ಸಾವಿಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.







