ಶಾಲೆಗೆ ಬಾಂಬ್ ಬೆದರಿಕೆ | ಹುಚ್ಚ ವೆಂಕಟ್ ಹೆಸರಿನಲ್ಲಿ ಇ-ಮೇಲ್ ಬಂದಿದೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಆರ್.ಆರ್ ನಗರದ ನ್ಯಾಷನಲ್ ಹಿಲ್‌ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಪತ್ರ ಬಂದಿರುವ ವಿಚಾರಕ್ಕೆ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಹುಚ್ವ ವೆಂಕಟ್ ಎಂಬ ವ್ಯಕ್ತಿಯ ಹೆಸರಿನಲ್ಲಿ ನಿನ್ನೆಯೇ ಒಂದು ಇ-ಮೇಲ್ ಬಂದಿದೆ. ಶಿಕ್ಷಕರು ಮತ್ತು ಸಿಬ್ಬಂದಿಗೆ ಇಂದು (ಸೋಮವಾರ) ಈ ವಿಚಾರ ತಿಳಿದ ತಕ್ಷಣ ನನಗೆ ಮಾಹಿತಿ ನೀಡಿದ್ದಾರೆ. ಬಳಿಕ ನಾನು ಪೊಲೀಸ್ ಕಮಿಷನರ್ ಮತ್ತು ಡಿಸಿಪಿ ಅವರಿಗೆ ಮಾಹಿತಿ ನೀಡಿದೆ. ಅಷ್ಟೊತ್ತಿಗೆ ಮಕ್ಕಳೆಲ್ಲ ಶಾಲೆಗೆ ಬಂದಿದ್ದರು.
'ಶಾಲೆಗೆ ನಾನೂ ತೆರಳುವವನಿದ್ದೆ ಪೊಲೀಸರು ನೀವು ಬರೋದು ಬೇಡ ಅಂತ ಹೇಳಿದ್ರು. ಸದ್ಯ ವಿದ್ಯಾರ್ಥಿಗಳನ್ನು ಶಾಲೆಯಿಂದ ಸ್ಥಳಾಂತರ ಮಾಡಲಾಗಿದೆ. ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪೋಷಕರು ಯಾರೂ ಆತಂಕಪಡುವ ಅಗತ್ಯ ಇಲ್ಲ' ಎಂದು ತಿಳಿಸಿದರು.
ಮಕ್ಕಳ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಮೇಲ್ನೋಟಕ್ಕೆ ಇದೊಂದು ಹುಸಿ ಬೆದರಿಕೆಯಂತೆ ಕಂಡುಬಂದಿದೆ. ಪೊಲೀಸರು ಪರಿಸ್ಥಿತಿಯನ್ನು ಕೂಲಂಕಷವಾಗಿ ಮೇಲ್ವಿಚಾರಣೆ ಮಾಡುತ್ತಿರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ನಾನು ಪೋಷಕರಿಗೆ ಭರವಸೆ ನೀಡುತ್ತೇನೆ. ವಿದ್ಯಾರ್ಥಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ, ಶಾಲೆಗೆ ರಜೆ ಘೋಷಿಸಲಾಗಿದೆ.
ಡಿ.ಕೆ. ಶಿವಕುಮಾರ್- ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ
ಇದನ್ನೂ ಓದಿ: ಬೆಂಗಳೂರು: ಡಿಕೆಶಿ ಮಾಲಕತ್ವದ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ







