ರಾಷ್ಟ್ರಪತಿ ಚುನಾವಣೆಯನ್ನು ಬಹಿಷ್ಕರಿಸಿದ ಅಕಾಲಿದಳದ ಶಾಸಕ!

Source: Facebook/ManpreetAyali
ಚಂಡೀಗಢ: ಭಾರತದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು 776 ಸಂಸದರು ಹಾಗೂ 4,033 ಶಾಸಕರು ಮತ ಚಲಾಯಿಸುವ ಮೂಲಕ ಚುನಾವಣೆ ನಡೆಯುತ್ತಿರುವಾಗಲೇ ಅಕಾಲಿದಳದ ಶಾಸಕರೊಬ್ಬರು ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಪಕ್ಷದ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಅಕಾಲಿದಳದ ಶಾಸಕ ಮನ್ಪ್ರೀತ್ ಸಿಂಗ್ ಅಯಾಲಿ ಫೇಸ್ಬುಕ್ ವೀಡಿಯೊದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹಾಗೂ ರಾಷ್ಟ್ರಪತಿ ಅಭ್ಯರ್ಥಿಗಳಾದ ದ್ರೌಪದಿ ಮುರ್ಮು ಅಥವಾ ಯಶವಂತ್ ಸಿನ್ಹಾ ಅವರಿಗೆ ತಾನು ಮತ ಹಾಕುವುದಿಲ್ಲ ಎಂದು ಘೋಷಿಸಿದ್ದಾರೆ.
"1984 ರ ಸಿಖ್ ನರಮೇಧ", ಆಪರೇಷನ್ ಬ್ಲೂಸ್ಟಾರ್ ಹಾಗೂ ಸಿಖ್ಖರ ಹಕ್ಕುಗಳ ಉಲ್ಲಂಘನೆಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ನಾನು ಮತ ಹಾಕಲು ಸಾಧ್ಯವಿಲ್ಲ. ಪಂಜಾಬ್ನ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ನಲ್ಲಿ ನನಗೆ ಯಾವುದೇ ನಂಬಿಕೆ ಇಲ್ಲ'' ಎಂದು ಮನ್ಪ್ರೀತ್ ಸಿಂಗ್ ಅಯಾಲಿ ಹೇಳಿದರು.
"ತಾನು ಬಿಜೆಪಿಯಿಂದ ಹೆಚ್ಚಿನ ಭರವಸೆ ಹೊಂದಿದ್ದೆ. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಅವರು ಪಂಜಾಬ್ನ ಸಮಸ್ಯೆಗಳನ್ನು ಪರಿಹರಿಸಲಿಲ್ಲ. ಇದು ಸ್ವಾರ್ಥವೋ ಅಥವಾ ಇನ್ನೇನೋ ಗೊತ್ತಿಲ್ಲ'' ಎಂದು ಅವರು ಹೇಳಿದರು.
"ಸಿಖ್ ಸಮುದಾಯದ ಭಾವನೆಗಳು, ಪಂಜಾಬ್ನ ಸಮಸ್ಯೆಗಳು ಹಾಗೂ ನನ್ನ ಆತ್ಮಸಾಕ್ಷಿಯ ಧ್ವನಿಯನ್ನು ಆಲಿಸಿ, ನಾನು ಇಂದು ರಾಷ್ಟ್ರಪತಿ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದಿಲ್ಲ'' ಎಂದು ಅವರು ಹೇಳಿದರು.
ಮುರ್ಮು ಅವರು ನಾಮನಿರ್ದೇಶನಕ್ಕೂ ಮುನ್ನ ಸಿಖ್ ಸಮುದಾಯದವರನ್ನು ಸಂಪರ್ಕಿಸಿಲ್ಲ ಎಂದ ಅವರು ಆಡಳಿತ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆಯೂ ಅಕಾಲಿದಳದ ನಾಯಕತ್ವವನ್ನು ಪ್ರಶ್ನಿಸಿದರು.







