ಸಿ.ಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆ; ಆಗಸ್ಟ್ 11ರಂದು ಮತದಾನ

ಬೆಂಗಳೂರು, ಜು. 18: ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಆಯ್ಕೆ ಮಾಡಲಾಗುವ ಸದಸ್ಯತ್ವಕ್ಕೆ ಸಿ.ಎಂ.ಇಬ್ರಾಹಿಂ ಅವರು ರಾಜಿನಾಮೆ ನೀಡಿದ ಹಿನ್ನೆಲೆ ತೆರವಾದ ಪರಿಷತ್ ಸ್ಥಾನಕ್ಕೆ ಆಗಸ್ಟ್ 11ಕ್ಕೆ ಉಪ ಚುನಾವಣೆ ಘೋಷಣೆ ಮಾಡಿ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
ಜು.25ಕ್ಕೆ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ನಾಮಪತ್ರ ಸಲ್ಲಿಸಲು ಆಗಸ್ಟ್ 1ಕ್ಕೆ ಕೊನೆಯ ದಿನ. ಆಗಸ್ಟ್ 2ಕ್ಕೆ ನಾಮಪತ್ರ ಪರಿಶೀಲನೆ, ಉಮೇದುವಾರಿಕೆ ಹಿಂಪಡೆಯಲು ಆಗಸ್ಟ್ 4ಕ್ಕೆ ಕೊನೆಯ ದಿನ. ಆಗಸ್ಟ್ 11ರ ಬೆಳಗ್ಗೆ9ರಿಂದ ಸಂಜೆ 4ಗಂಟೆಯ ವರೆಗೆ ಮತದಾನ ನಡೆಸಲಿದ್ದು, ಅಂದು ಸಂಜೆ 5ಗಂಟೆಯಿಂದ ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಮೇಲ್ಮನೆ ಪ್ರತಿಪಕ್ಷದ ನಾಯಕನ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ಮಾರ್ಚ್ 12ರಂದು ರಾಜೀನಾಮೆ ನೀಡಿದರು. ಆ ಬಳಿಕ ಜೆಡಿಎಸ್ ಸೇರ್ಪಡೆಯಾಗಿದ್ದರು. ಅವರ ರಾಜೀನಾಮೆಯಿಂದ ತೆರವಾದ ಪರಿಷತ್ ಸ್ಥಾನಕ್ಕೆ ಇದೀಗ ಉಪಚುನಾವಣೆ ಘೋಷಣೆ ಮಾಡಲಾಗಿದೆ.





