ಮಾಜಿ ಕಾರ್ಪೊರೇಟರ್ ಪತಿ ಅಯೂಬ್ ಖಾನ್ ಕೊಲೆ ಪ್ರಕರಣ: ಆರೋಪಿ ಸೆರೆ

ಅಯೂಬ್ ಖಾನ್
ಬೆಂಗಳೂರು, ಜು.18: ಬಿಬಿಎಂಪಿ ಮಾಜಿ ಸದಸ್ಯೆಯ ಪತಿ ಅಯೂಬ್ ಖಾನ್ ಕೊಲೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮತೀನ್ ಎಂಬಾತನನ್ನು ಇಲ್ಲಿನ ಚಾಮರಾಜಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜ.13 ರಂದು ಚಾಮರಾಜಪೇಟೆ ಬಳಿಯ ಟಿಪ್ಪು ನಗರದ ಬಿಬಿಎಂಪಿ ಮಾಜಿ ಸದಸ್ಯೆ ನಾಝೀಮಾ ಪತಿ ಆಯೂಬ್ ಖಾನ್ನನ್ನು ಹತ್ಯೆ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಮತೀನ್ ಖಾನ್ ಕೆಂಗೇರಿ ಬಳಿ ಅಡಗಿದ್ದ ಖಚಿತವಾದ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಅಯೂಬ್ ಖಾನ್ ಅಣ್ಣನ ಮಗನಾದ ಆರೋಪಿ ಮತೀನ್ ಖಾನ್ ಕಳೆದ 4 ದಿನಗಳಿಂದ ಮಂಡ್ಯ, ರಾಮನಗರ, ಕೋಲಾರ ಸೇರಿದಂತೆ ಹಲವು ಕಡೆಗಳಲ್ಲಿ ಸುತ್ತಾಡಿಕೊಂಡು ಕೆಂಗೇರಿ ಬಳಿ ಬಂದು ತಲೆಮರೆಸಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಎರಡು ದಿನಗಳ ಹಿಂದಷ್ಟೇ ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟಿದ್ದ. ಅದನ್ನು ಆಧರಿಸಿ ಮೊಬೈಲ್ ಕರೆ ವಿಡಿಯೊ ಸುಳಿವಿನ ಮೇಲೆ ಆರೋಪಿಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.







