ಉಡುಪಿ: ಜಿಲ್ಲೆಯಲ್ಲಿ ಮುಂದುವರಿದ ಮಳೆಹಾನಿ

ಸಾಂದರ್ಭಿಕ ಚಿತ್ರ
ಉಡುಪಿ, ಜು.18: ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಇಂದು ಇನ್ನಷ್ಟು ಕಡಿಮೆಯಾಗಿದ್ದು, ರವಿವಾರ ಜಿಲ್ಲೆಯಲ್ಲಿ ಒಟ್ಟು ಎಂಟು ಮಳೆಹಾನಿ ಪ್ರಕರಣಗಳು ವರದಿಯಾಗಿದ್ದು, 3.06ಲಕ್ಷ ರೂ.ನಷ್ಟವಾಗಿರುವ ಬಗ್ಗೆ ಜಿಲ್ಲಾ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿವೆ.
ಬೈಂದೂರು ತಾಲೂಕಿನಲ್ಲಿ ಮೂರು ಪ್ರಕರಣಗಳಿಂದ 1.60ಲಕ್ಷ ರೂ., ಬ್ರಹ್ಮಾವರ ತಾಲೂಕಿನಲ್ಲೂ ಮೂರು ಪ್ರಕರಣಗಳಿಂದ 1.06 ಲಕ್ಷ ರೂ. ಹಾಗೂ ಕಾರ್ಕಳ ತಾಲೂಕಿನಲ್ಲಿ ಎರಡು ಪ್ರಕರಣಗಳಿಂದ 40ಸಾವಿರ ರೂ.ನಷ್ಟದ ವರದಿ ಬಂದಿವೆ.
ಬ್ರಹ್ಮಾವರ ಐರೋಡಿ ಗ್ರಾಮದಲ್ಲಿ ಬಾಬಿ ಮರಕಾಲ್ತಿ ಎಂಬವರ ಮನೆಯ ಗೋಡೆ ಗಾಳಿ-ಮಳೆಗೆ ಕುಸಿದು 75ಸಾವಿರ, ಗುಂಡ್ಮಿಯ ನಾರಾಯಣ ಆಚಾರ್ ಎಂಬವರ ಮನೆ ಮೇಲೆ ಮರಬಿದ್ದು 25 ಸಾವಿರ ಹಾನಿಯಾಗಿದೆ. ಕಾರ್ಕಳದ ಮುಡಾರು ಗ್ರಾಮದ ಶಿವಣ್ಣ ಪೂಜಾರಿ ಮತ್ತು ಗೀತಾ ಎಂಬವರ ಮನೆಗಳಿಗೆ ಭಾಗಶ: ಹಾನಿಯಾಗಿದ್ದು ತಲಾ 20ಸಾವಿರ ನಷ್ಟದ ಅಂದಾಜು ಮಾಡಲಾಗಿದೆ.
ಬೈಂದೂರು ತಾಲೂಕಿನ ನಾಡ ಗ್ರಾಮದ ದುರ್ಗಿಯವರ ಮನೆ ಭಾರೀ ಮಳೆಯಿಂದ ಭಾಗಶ: ಕುಸಿದಿದ್ದು 90,000ರೂ.ನಷ್ಟವಾಗಿದೆ. ಬಿಡೂರಿನ ನಿತ್ಯಾನಂದ ಶೇರಿಗಾರ್ರ ಮನೆಗೆ 50ಸಾವಿರ ಹಾಗೂ ತಗ್ಗರ್ಸೆಯ ನಾಗರಾಜ ಶೆಟ್ಟಿ ಎಂಬವರ ಜಾನುವಾರು ಕೊಟ್ಟಿಗೆ ಸಂಪೂರ್ಣ ಬಿದ್ದು 20ಸಾವಿರ ರೂ.ನಷ್ಟ ವಾಗಿರುವ ಬಗ್ಗೆ ಇಲ್ಲಿಗೆ ಮಾಹಿತಿ ಬಂದಿದೆ.
ಆರೆಂಜ್ ಅಲರ್ಟ್: ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರವೂ ಆರೆಂಜ್ ಅಲರ್ಟ್ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಶ್ಚಿಮ ಕರಾವಳಿ ಪ್ರಕ್ಷುಬ್ಧವಾಗಿದ್ದರೂ ಕರಾವಳಿಯ ಮೀನುಗಾರರಿಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ.







