ಬೆಂಗಳೂರು | ಕೆಲಸ ಮಾಡಿಕೊಂಡಿದ್ದ ಚಿನ್ನಾಭರಣ ಮಳಿಗೆಯಲ್ಲಿ ಕಳವುಗೈದ ಪ್ರಕರಣ; ಆರೋಪಿಗಳಿಬ್ಬರ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.18: ಸಿಬ್ಬಂದಿ ಆಗಿ ಕೆಲಸ ಮಾಡಿಕೊಂಡಿದ್ದ ಚಿನ್ನಾಭರಣ ಮಳಿಗೆಯಲ್ಲಿಯೇ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಯಶವಂತಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಶವಂತಪುರದ ಚೇತನ್(27) ಹಾಗೂ ಮತ್ತಿಕೆರೆಯ ವಿಜಯ್(29) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಯಶವಂತಪುರ 1ನೆ ಮುಖ್ಯರಸ್ತೆಯಲ್ಲಿ ದಿ ಬೆಸ್ಟ್ ಜ್ಯೂವೆಲ್ಲರಿಯಲ್ಲಿ ಗ್ರಾಹಕರೊಬ್ಬರು ಚಿನ್ನದ ಸರವನ್ನು ಖರೀದಿಗೆ ಮುಂದಾಗಿದ್ದರು. ಮಾದರಿ ಸರವನ್ನು ಪರಿಶೀಲನೆ ನಡೆಸಿದಾಗ ಸಿಬ್ಬಂದಿ ಆಗಿ ಕೆಲಸ ಮಾಡಿಕೊಂಡಿರುವ ಆರೋಪಿಯು ತೆಗೆದುಕೊಂಡಿರುವುದು ಕಂಡು ಬಂದಿದ್ದು, ಬಳಿಕ ಅಂಗಡಿಯಲ್ಲಿನ ಕೆಲವು ಮಾಲಕರು ಪರಿಶೀಲನೆ ಮಾಡಿದಾಗ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ.
ಈ ಬಗ್ಗೆ ನೀಡಿದ ದೂರಿನ ಮೇರೆಗೆ ಯಶವಂತಪುರ ಪೊಲೀಸರು ಕಳವು ಪ್ರಕರಣ ದಾಖಲಿಸಿದ್ದಾರೆ. ಚೇತನ್ ಹಾಗೂ ಆತನ ಸ್ನೇಹಿತ ವಿಜಯ್ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಇವರಿಂದ 99 ಸಾವಿರ ನಗದು ಸೇರಿ 26.25 ಲಕ್ಷ ಮೌಲ್ಯದ 372.9 ಗ್ರಾಂ ಚಿನ್ನಾಭರಣಗಳು, ಕಳವು ಮಾಡಿದ್ದ ಚಿನ್ನಾಭರಣಗಳನ್ನು ವಿಲೇವಾರಿ ಬಂದ ಹಣದಿಂದ ಖರೀದಿಸಿದ್ದ ಕಾರು ಜಪ್ತಿ ಮಾಡಲಾಗಿದೆ ಎಂದು ಅವರು ಹೇಳಿದರು.





