ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ದೂರುದಾರ ಪಡೆದಿರುವ ಸರಕಾರದ ಸೌಲಭ್ಯ ಹಿಂಪಡೆಯಲು ಆಗ್ರಹ

ಚಿಕ್ಕಮಗಳೂರು, ಜು.18: ಗೋಣಿಬೀಡು ಪಿಎಸ್ಸೈ ಅರ್ಜುನ್ ಎಂಬವರು ದಲಿತ ಯುವಕನಿಗೆ ಮೂತ್ರ ಕುಡಿಸಿದ್ದಾರೆ ಎನ್ನಲಾದ ಪ್ರಕರಣದ ದೂರುದಾರ ಪುನೀತ್ ಹೈಕೋಟ್‍ನಲ್ಲಿ ಆರೋಪಿ ಸ್ಥಾನದಲ್ಲಿದ್ದ ಪಿಎಸ್ಸೈಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೂರುದಾರ ಪುನೀತ್ ಪಡೆದಿರುವ ಸರಕಾರಿ ಸೌಲಭ್ಯವನ್ನು ಮರುಪಾವತಿ ಮಾಡಬೇಕು. ಪುನೀತ್ ಮೇಲೆ ಪ್ರಕರಣ ದಾಖಲಿಸಿಬೇಕು. ರಾಜಿ ಸಂದಾನಕ್ಕೆ ಸೂತ್ರಧಾರಿಗಳಾದವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ ಮತ್ತು ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ಸೋಮವಾರ ಈ ಸಂಬಂಧ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಮುಖಂಡರು ಮತ್ತು ಕಾರ್ಯಕರ್ತರು, ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯ ಕಿರುಗುಂದ ಗ್ರಾಮದ ಪುನೀತ್ ಎಂಬ ಯುವಕನಿಗೆ ಠಾಣಾಧಿಕಾರಿ ಅರ್ಜುನ್ ಮೂತ್ರ ಕುಡಿಸಿದ ಪ್ರಕರಣ ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಎಲ್ಲಾ ಸಂಘ ಸಂಸ್ಥೆಗಳು ಪ್ರಕರಣವನ್ನು ಖಂಡಿಸಿ ಠಾಣಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿಲಾಗಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್ಸೈ ಅವರ ಅಮಾನತು ಆದೇಶ ಆಗಿದ್ದು, ಅವರ ಬಂಧನವೂ ಆಗಿತ್ತು. ಆದರೆ ಇತ್ತೀಚೆಗೆ ಹೈಕೋರ್ಟ್‍ನಲ್ಲಿ ದೂರುದಾರ ಪುನೀತ್ ಅವರು ಆರೋಪಿ ಪಿಎಸ್ಸೈ ಅರ್ಜುನ್ ಜೊತೆಗೆ ರಾಜಿ ಸಂದಾನ ಮಾಡಿಕೊಂಡಿರುವುದು ಖಂಡನೀಯ.
ಇದನ್ನೂ ಓದಿ... ದಲಿತ ಯುವಕನಿಗೆ ಗೋಣಿಬೀಡು ಪಿಎಸ್ಸೈ ಮೂತ್ರ ಕುಡಿಸಿದ ಪ್ರಕರಣ: ಹೈಕೋರ್ಟ್ ನಲ್ಲಿ ರಾಜಿ
ಈ ಸಂಬಂಧ ಪುನೀತ್ ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದು, ಆತ ಸರಕಾರದಿಂದ ಪಡೆದಿರುವ ಸವಲತ್ತನ್ನು ಸರಕಾರಕ್ಕೆ ಮರುಪಾವತಿ ಮಾಡಬೇಕು. ಪುನೀತ್ ವಿರುದ್ಧ ತನಿಖೆ ನಡೆಸಿ ಪ್ರಕರಣ ದಾಖಲಿಸಬೇಕು ಹಾಗೂ ರಾಜಿ ಸಂಧಾನದ ಸೂತ್ರಧಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ದಸಂಸ ಮುಕಂಡರಾದ ಯಲಗುಡಿಗೆ ಹೊನ್ನಪ್ಪ, ಕಬ್ಬಿಗೆರೆ ಮೋಹನ್‍ಕುಮಾರ್, ಕೆ.ಸಿ.ವಸಂತಕುಮಾ ರ್, ವಿವಿಧ ಸಂಘಟನೆಗಳ ಮುಖಂಡರಾದ ಗೌಸ್ ಮೊಹಿಯುದ್ಧಿನ್, ಕೃಷ್ಣಮೂರ್ತಿ, ಹರೀಶ್ ಮಿತ್ರ, ಲಕ್ಷ್ಮಣ್ ಹುಣಸೆಮಕ್ಕಿ, ವಕೀಲ ಪರಮೇಶ್ವರ್, ಚಂದ್ರು ಕಳಗಣೆ, ನಿಂಗಪ್ಪ ಮಾಣಿಮಕ್ಕಿ, ಗೋಪಾಲ್ ಗೌಡ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.







