ಸುಪ್ರೀಂ ಆದೇಶದ ಪ್ರತಿ ಕೈ ಸೇರದ ಹಿನ್ನೆಲೆ; ಉಪ ತಹಶೀಲ್ದಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು, ಜು.18: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇರೆಗೆ ಬಂಧನಕ್ಕೊಳಗಾಗಿರುವ ಉಪ ತಹಶೀಲ್ದಾರ್ ಪಿ.ಎಸ್.ಮಹೇಶ್ ಸಲ್ಲಿಸಿರುವ ಜಾಮೀನು ಮನವಿಯನ್ನು ಪರಿಗಣಿಸಬೇಕೆಂದು ನ್ಯಾ.ಎಚ್.ಪಿ.ಸಂದೇಶ್ ಅವರಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ, ಆ ಆದೇಶದ ಪ್ರತಿ ಕೈ ಸೇರದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆಯನ್ನು ಜು.20ಕ್ಕೆ ಮುಂದೂಡಿಕೆ ಮಾಡಿದೆ.
ಪಿ.ಎಸ್.ಮಹೇಶ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನ್ಯಾ.ಎಚ್.ಪಿ.ಸಂದೇಶ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು.
ಎಸಿಬಿ ಪರ ವಾದಿಸಿದ ವಕೀಲರು, ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶಕ್ಕೆ ಸುಪ್ರೀಂಕೋರ್ಟ್ ಸೋಮವಾರ ಬೆಳಗ್ಗೆ ತಡೆ ನೀಡಿದೆ, ಉಪ ತಹಶೀಲ್ದಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಲು ಆದೇಶಿಸಿದೆ. ಆದೇಶ ಇನ್ನಷ್ಟೇ ಕೈಸೇರಬೇಕಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸುಪ್ರೀಂಕೋರ್ಟ್ ಆದೇಶದ ಪ್ರತಿ ಕೈ ಸೇರಿದ ಬಳಿಕ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸೋಣ ಎಂದು ತಿಳಿಸಿತು. ಆಗ ಅರ್ಜಿದಾರರ ಪರ ವಕೀಲರು ಒಪ್ಪಿದರು.
ಜು.18ರಂದು ಸುಪ್ರೀಂಕೋರ್ಟ್, ಎಸಿಬಿಗೆ ಕರ್ನಾಟಕ ಹೈಕೋರ್ಟ್ ಪೀಠ ಇತ್ತೀಚೆಗೆ ನೀಡಿದ ನಿರ್ದೇಶನಗಳಿಗೆ ತಡೆಯಾಜ್ಞೆ ವಿಧಿಸಿದೆ. ಉಪ ತಹಶೀಲ್ದಾರ್ ಪಿ.ಎಸ್.ಮಹೇಶ್ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ಪರಿಗಣಿಸಬೇಕೆಂದು ಆದೇಶ ನೀಡಿದೆ.







