ಮಸ್ಜಿದ್-ಎ-ಅಲ್-ಖೂಬ ಪ್ರಕರಣ: ಒತ್ತುವರಿ ಸ್ಥಳ ಬಿಬಿಎಂಪಿಗೆ ಹಿಂದಿರುಗಿಸುವಂತೆ ಆದೇಶ

ಬೆಂಗಳೂರು, ಜು.18: ವಿಜಯನಗರದಲ್ಲಿರುವ ‘ಮಸ್ಜಿದ್-ಎ-ಅಲ್-ಖೂಬ’ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟಿರುವ 5/45 ಚದರ ಅಡಿಯ ಸ್ವತ್ತನ್ನು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರೆವುಗೊಳಿಸಲು ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಸಕ್ಷಮ ಪ್ರಾಧಿಕಾರಿಯವರ ನ್ಯಾಯಾಲಯವು ಜೂ.14ರಂದು ಆದೇಶ ಹೊರಡಿಸಿದೆ.
ಅದರಂತೆ, ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟಿರುವ ಸ್ವತ್ತನ್ನು ಪಾಲಿಕೆಯ ವಶಕ್ಕೆ ಪಡೆದುಕೊಂಡು ಖುಲ್ಲಾ ಪಡಿಸಲು ಕಾನೂನು ರೀತಿ ಕ್ರಮ ವಹಿಸಬೇಕು. ಈ ಸ್ವತ್ತಿನ ಈಗಿರುವ ಖಾತೆದಾರರ ಖಾತೆಯನ್ನು ರದ್ದುಪಡಿಸಲಾಗಿದೆ. ಪ್ರಶ್ನಿತ ಸ್ವತ್ತನ್ನು ಬಿಬಿಎಂಪಿ ಆಸ್ತಿಯೆಂದು ದಾಖಲಿಸುವಂತೆ ಸಕ್ಷಮ ಪ್ರಾಧಿಕಾರ ಆದೇಶಿಸಿದೆ ಎಂದು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತರು ತಿಳಿಸಿದ್ದಾರೆ.
ಅಲ್ಲದೆ, ಈ ಆಸ್ತಿಯನ್ನು ಪಾಲಿಕೆಯ ವಶಕ್ಕೆ ಪಡೆದುಕೊಂಡಿದೆ ಹಾಗೂ ಈಗಾಗಲೆ ನಕ್ಷೆ ಮಂಜೂರಾತಿಯನ್ನು ರದ್ದುಪಡಿಸಿದೆ. ವಿಜಯನಗರದ ಕಂದಾಯ ಅಧಿಕಾರಿ, ಕಾರ್ಯಪಾಲಕ ಅಭಿಯಂತರ ಮತ್ತು ನಗರ ಯೋಜನೆಯ ಸಹಾಯ ನಿರ್ದೇಶಕರು ಈ ಆದೇಶವನ್ನು ಪಾಲಿಸುವಂತೆ ಬಿಬಿಎಂಪಿ ದಕ್ಷಿಣ ವಲಯ ಆಯುಕ್ತರು ಜೂ.20ರಂದು ಆದೇಶ ಹೊರಡಿಸಿದ್ದರು.
ವಿಜಯನಗರದ ಆರ್.ಪಿ.ಸಿ.ಲೇಔಟ್, ಹೊಸಹಳ್ಳಿ ಬಡಾವಣೆಯ 3ನೆ ಮುಖ್ಯರಸ್ತೆಯಲ್ಲಿರುವ ನಿವೇಶನ ಸಂಖ್ಯೆ 13 ಮತ್ತು 15ರ ನಡುವೆ ಮುನ್ಸಿಪಲ್ ಖಾತೆ ಸಂಖ್ಯೆ 14ರ ಪಾಲಿಕೆಗೆ ಸೇರಿದ 5/45 ಅಡಿ ಪ್ಯಾಸೇಜ್ ಅನ್ನು ಪಾಲಿಕೆಯು ಪಾಲಿಕೆಯು ಸಾರ್ವಜನಿಕರ ಓಡಾಟಕ್ಕೆ ಮೀಸಲಿಟ್ಟಿತ್ತು. ಇಲ್ಲಿರುವ ಮಸ್ಜಿದ್ ಎ ಅಲ್ ಖೂಬಾ ವನ್ನು ನಿವೇಶನ ಸಂಖ್ಯೆ 13 ಹಾಗೂ 15ರನ್ನು ಒಟ್ಟುಗೂಡಿಸಿ ನಿರ್ಮಿಸುವಾಗ ನಿವೇಶನ ಸಂಖ್ಯೆ 14 ಅನ್ನು ಸೇರಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಪ್ರಾದೇಶಿಕ ಆಯುಕ್ತರಿಗೆ ಬಿಬಿಎಂಪಿ ದಕ್ಷಿಣ ವಲಯ ಜಂಟಿ ಆಯುಕ್ತರು ಹಾಗೂ ಸಹಾಯಕ ಕಂದಾಯ ಅಧಿಕಾರಿ ಅರ್ಜಿ ಸಲ್ಲಿಸಿದ್ದರು.
ಅದರಂತೆ, ವಾದ-ಪ್ರತಿವಾದ ಆಲಿಸಿದ ಪ್ರಾದೇಶಿಕ ಆಯುಕ್ತರು, ದಾಖಲಾತಿಗಳನ್ನು ಪರಿಶೀಲಿಸಿ, ಒತ್ತುವರಿಯಾಗಿರುವ ಭಾಗವನ್ನು ನಿಯಮಾನುಸಾರ ಸ್ವತ್ತನ್ನು ಪಾಲಿಕೆಯ ವಶಕ್ಕೆ ಪಡೆದುಕೊಂಡು ಖುಲ್ಲಾ ಪಡಿಸಲು ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಆದೇಶ ನೀಡಿದ್ದಾರೆ.
ಬಿಬಿಎಂಪಿ ನೋಟಿಸ್: ಪ್ರಾದೇಶಿಕ ಆಯುಕ್ತರ ಆದೇಶದಂತೆ ಬಿಬಿಎಂಪಿ ಮಸ್ಜಿದ್ ಎ ಅಲ್ ಖೂಬ ಸಮಿತಿಯ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿ, ಒತ್ತುವರಿ ಭಾಗವನ್ನು ತೆರವುಗೊಳಿಸುವ ಸಂಬಂಧ ನೋಟಿಸ್ ಜಾರಿ ಮಾಡಿದೆ.
*ಪ್ರಕರಣದ ಹಿನ್ನೆಲೆ: ನಿವೇಶನ ಸಂಖ್ಯೆ 13 ವಿಸ್ತೀರ್ಣ 45/35 ಚ.ಅಡಿ ಸ್ವತ್ತನ್ನು ಪಿ.ಬಾಷಾ ಎಂಬುವವರು ಖರೀದಿಸಿದ್ದಾರೆ ಹಾಗೂ ನಿವೇಶನ ಸಂಖ್ಯೆ 15 ವಿಸ್ತೀರ್ಣ 45/31 ಚ.ಅಡಿ ಇದ್ದು, ಈ ಸ್ವತ್ತನ್ನು ಪೀರ್ ಸಾಬ್ ಎಂಬುವವರು ಖರೀದಿಸಿದ್ದಾರೆ. ಈ ಎರಡು ಸ್ವತ್ತುಗಳ ಮಧ್ಯದಲ್ಲಿ ನಿವೇಶನ ಸಂಖ್ಯೆ 14 ಇದೆ*.
ಪಿ.ಬಾಷಾ ನೋಂದಾಯಿತ ಕ್ರಯಪತ್ರದ ಮೂಲಕ ನಿವೇಶನ ಸಂಖ್ಯೆ 13ರನ್ನು ಫೈಝುಲ್ಲಾ ಬಖಿಯಥ್ ಇಸ್ಲಾಮಿಕ್ ವೆಲ್ಫೇರ್ ಟ್ರಸ್ಟ್ ಅವರಿಗೆ ಮಾರಾಟ ಮಾಡಿದ್ದಾರೆ. ನಿವೇಶನ ಸಂಖ್ಯೆ 15 ಅನ್ನು ಅಮೀನಾ ಬೀ-ಕೋಂ ಲೇಟ್‍ಪೀರ್ ಸಾಬ್ ಮತ್ತು ಇತರರು ನೋಂದಣಿ ಮಾಡದ ದಸ್ತಾವೇಜಿನ ಮೂಲಕ ಫೈಝುಲ್ಲಾ ಬಖಿಯಥ್ ಇಸ್ಲಾಮಿಕ್ ವೆಲ್ಫೇರ್ ಟ್ರಸ್ಟ್ ಗೆ ವರ್ಗಾವಣೆ ಮಾಡಿದ್ದಾರೆ.
*ತಪ್ಪಾಗಿ ಖಾತೆ ಮಾಡಿಕೊಟ್ಟ ಬಿಬಿಎಂಪಿ*: *ಈ ಎರಡು ಸ್ವತ್ತುಗಳನ್ನು ಒಂದುಗೂಡಿಸಲು ಫೈಝುಲ್ಲಾ ಬಖಿಯಥ್ ಇಸ್ಲಾಮಿಕ್ ವೆಲ್ಫೇರ್ ಟ್ರಸ್ಟ್‍ನವರು ಪಾಲಿಕೆಗೆ ಅರ್ಜಿ ಸಲ್ಲಿಸಿ ಖಾತೆಯನ್ನು ಮಾಡಿಸಿಕೊಂಡಿದ್ದಾರೆ. ಈ ವೇಳೆ ಎರಡು ನಿವೇಶನಗಳ ನಡುವೆ ಪಾಲಿಕೆಯ ಸ್ವತ್ತು ಇರುವುದನ್ನು ಪರಿಶೀಲಿಸದೆ ತಪ್ಪಾಗಿ ಖಾತೆ ಮಾಡಿಕೊಡಲಾಗಿದೆ*.
1998ರಲ್ಲಿ ರಾಜ್ಯ ವಕ್ಫ್ ಬೋರ್ಡ್‍ನ ಸಿಇಒ ನೀಡಿರುವ ನೋಂದಣಿ ಪ್ರಮಾಣ ಪತ್ರದಲ್ಲಿಯೂ ನಿವೇಶನ ಸಂಖ್ಯೆ 13ರ ಚೆಕ್ಕುಬಂದಿಯಲ್ಲಿ ಪಶ್ಚಿಮಕ್ಕೆ 5 ಅಡಿ ಪ್ಯಾಸೇಜ್ ಇರುವುದನ್ನು ಹೇಳಲಾಗಿದೆ. ಫೈಝುಲ್ಲಾ ಬಖಿಯಥ್ ಇಸ್ಲಾಮಿಕ್ ವೆಲ್ಫೇರ್ ಟ್ರಸ್ಟ್‍ನವರು ಎರಡು ನಿವೇಶನಗಳನ್ನು ಒಟ್ಟುಗೂಡಿಸುವಾಗ ತಪ್ಪಾದ ಮಾಹಿತಿ ನೀಡಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಪ್ರಾದೇಶಿಕ ಆಯುಕ್ತರು ಗಮನಿಸಿದ್ದಾರೆ.







