ಹೇನಬೇರು ಕಾರು ಸುಟ್ಟು ಕೊಲೆಗೈದ ಪ್ರಕರಣ: ನಾಲ್ವರು ಆರೋಪಿಗಳಿಗೆ ಆ.1ರವರೆಗೆ ನ್ಯಾಯಾಂಗ ಬಂಧನ

ಕುಂದಾಪುರ, ಜು.18: ಬೈಂದೂರು ಒತ್ತಿನೆಣೆ ಸಮೀಪದ ಹೇನಬೇರು ಎಂಬಲ್ಲಿ ಕಾರು ಸಹಿತ ವ್ಯಕ್ತಿಯೊಬ್ಬರನ್ನು ಸುಟ್ಟು ಕೊಲೆಗೈದ ಪ್ರಕರಣದ ನಾಲ್ವರು ಬಂಧಿತ ಆರೋಪಿಗಳಿಗೆ ಆ.1ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕುಂದಾಪುರ ಜೆಎಂಎಫ್‌ಸಿ ನ್ಯಾಯಾಲಯ ಸೋಮವಾರ ಆದೇಶ ನೀಡಿದೆ.
ಬಂಧಿತ ಪ್ರಮುಖ ಆರೋಪಿಗಳಾದ ಸದಾನಂದ ಶೇರಿಗಾರ್, ಶಿಲ್ಪಾ ಸಾಲ್ಯಾನ್ ಅವರನ್ನು ಜೂ.14ರಂದು ಹಾಗೂ ಆರೋಪಿಗಳಿಗೆ ಸಹಕರಿಸಿದ ಸತೀಶ್ ದೇವಾಡಿಗ, ನಿತಿನ್ ದೇವಾಡಿಗ ಜೂ.15ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಪ್ರಮುಖ ಆರೋಪಿಗಳಿಬ್ಬರ ಕಸ್ಟಡಿ ಅವಧಿ ಇಂದಿಗೆ ಮುಗಿದಿದ್ದು ಇನ್ನಿಬ್ಬರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ನಾಳೆಗೆ ಮುಗಿಯಲಿದೆ.
ಮಹಜರು, ಪಂಚನಾಮೆ, ಆರೋಪಿಗಳ ಹೇಳಿಕೆ, ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವ ಎಲ್ಲಾ ತನಿಖಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಈ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಪ್ರಕರಣದ ತನಿಖಾಧಿಕಾರಿ ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದ ಪೊಲೀಸರ ತಂಡ ಸೋಮವಾರ ಸಂಜೆ ಕುಂದಾಪುರ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶ ಧನೇಶ್ ಮುಗಳಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದರು. ಸದಾನಂದ, ಸತೀಶ್, ನಿತಿನ್ನನ್ನು ಹಿರಿಯಡಕ ಸಬ್ಜೈಲ್ ಹಾಗೂ ಮಹಿಳಾ ಆರೋಪಿ ಶಿಲ್ಪಾಳನ್ನು ಶಿವಮೊಗ್ಗ ಜೈಲಿಗೆ ಕಳುಹಿಸಲಾಯಿತು. ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಾಶ್ರೀ ವಾದಿಸಿದ್ದರು.
ಪ್ರಕರಣವೊಂದರಲ್ಲಿ ಶಿಕ್ಷೆ ಆಗುವ ಭಯದಿಂದ ಸದಾನಂದ ಶೇರಿಗಾರ್, ತನ್ನದೇ ಕಾರಿನಲ್ಲಿ ಆತ್ಮಹತ್ಯೆಗೆ ಶರಣಾದಂತೆ ನಾಟಕ ಸೃಷ್ಟಿ ಮಾಡಿ ಸಂಚು ಮಾಡಿದ್ದು, ಅದಕ್ಕಾಗಿ ತನ್ನ ಪ್ರೇಯಸಿ ಜೊತೆ ಸೇರಿ ಆನಂದ ದೇವಾಡಿಗ ಎಂಬವರಿಗೆ ವಯಾಗ್ರ ಮಾತ್ರೆ ಎಂದು ನಂಬಿಸಿ ನಿದ್ರೆ ಮಾತ್ರೆ ಬೆರೆಸಿದ ಮದ್ಯ ನೀಡಿ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ಕಾರ್ಕಳದಿಂದ ಬೈಂದೂರು ಶಿರೂರು ಸಮೀಪದ ಹೇನಬೇರು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿ ಜು.12ರ ನಸುಕಿನ ವೇಳೆ ಕಾರಿಗೆ ಪೆಟ್ರೋಲ್ ಹಾಕಿ ಆನಂದ ದೇವಾಡಿಗ ಸಹಿತ ಕಾರನ್ನು ಸುಟ್ಟು ಕೊಲೆ ಮಾಡಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಂಚವೂ ಪಶ್ಚಾತಾಪವಿಲ್ಲ!
ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸದಾನಂದ ಮತ್ತು ಶಿಲ್ಪಾನ್ಯಾಯಾಲಯಕ್ಕೆ ಕರೆತಂದಿದ್ದು ಇಬ್ಬರೂ ಯಾವುದೇ ಭಾವನೆ ತೋರಿಸದಂತೆ ಕಂಡುಬಂತು. ನ್ಯಾಯಾಲಯದ ಒಳಗೆ ಪ್ರಕ್ರಿಯೆ ಮುಗಿದು ಹೊರಕ್ಕೆ ಕರೆ ತರುವಾಗ ಇವರಿಬ್ಬರು ಮಾಧ್ಯಮ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಹೋದರು. ಬಳಿಕ ಸದಾನಂದನನ್ನು ಹಾಗೂ ಶಿಲ್ಪಾಳನ್ನು ಪ್ರತ್ಯೇಕ ಜೈಲಿಗೆ ಕರೆದೊಯ್ಯಬೇಕಾಗಿದ್ದರಿಂದ ವಾಹನದ ಬಳಿ ಹೋಗುವ ವೇಳೆ ಸದಾನಂದನಿಗೆ ಶಿಲ್ಪಾ ಕೈ ಬೀಸಿ ಬೈ ಹೇಳಿ ಬೀಳ್ಕೊಟ್ಟಳು.