ಬೆಂಗಳೂರು | ಪಾಕಿಸ್ತಾನಕ್ಕೆ ಫೋಟೋ ರವಾನಿಸಿದ ಆರೋಪ: ಜಿತೇಂದರ್ ಸಿಂಗ್ ಜಾಮೀನು ಅರ್ಜಿ ಹೈಕೋರ್ಟ್ ನಿಂದ ವಜಾ

ಬೆಂಗಳೂರು, ಜು.18: ಮಿಲಿಟರಿ ಸಮವಸ್ತ್ರ ಧರಿಸಿ ದೇಶದ ಪ್ರಮುಖ ಸೇನಾ ಪ್ರದೇಶಗಳ ಫೋಟೋಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಎಂಬ ಆರೋಪ ಹೊತ್ತಿರುವ ಬಟ್ಟೆ ವ್ಯಾಪಾರಿ ಜಿತೇಂದರ್ ಸಿಂಗ್ ಎಂಬಾತನ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಜಾಮೀನು ಕೋರಿ ಜಿತೇಂದರ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಭಾರತೀಯ ಸೇನೆಯ ರಹಸ್ಯ ಮಾಹಿತಿಯ ಫೋಟೋಗಳನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡ ಪ್ರಕರಣ ಸಂಬಂಧ ರಾಜಸ್ತಾನ ಮೂಲದ ಜೀತೆಂದರ್ ಸಿಂಗ್‍ನನ್ನು ಭಯೋತ್ಪಾದನ ನಿಗ್ರಹ ದಳ ಬಂಧಿಸಿತ್ತು. ಆದರೆ, ತಾನು ಕೇವಲ ಪಾಕಿಸ್ತಾನ ಯುವತಿಯೊಂದಿಗೆ ಚಾಟ್ ಮಾಡಿದ್ದೇನೆ ಎಂಬ ಮಾಹಿತಿಯನ್ನು ನೀಡಿದ್ದಾನೆ.
ವಕೀಲರ ವಾದ ಆಲಿಸಿದ ನ್ಯಾಯಪೀಠ, ದೇಶದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದರಿಂದ ಭದ್ರತೆಗೆ ಧಕ್ಕೆಯಾಗಲಿದೆ. ಈ ಸ್ಥಳಗಳನ್ನು ಗುರಿಯಾಗಿಸಿಕೊಳ್ಳಬಹುದು. ಹೀಗಾಗಿ, ಜಾಮೀನು ನೀಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಹಿನ್ನೆಲೆ ಏನು: ಜೀತೆಂದರ್ ದೂರದ ಸಂಬಂಧಿಯೊಬ್ಬರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಕಂಡು ಈತನೂ ಮಿಲಿಟರಿಗೆ ಸೇರುವ ಆಕಾಂಕ್ಷೆ ಹೊಂದಿದ್ದ. ಜವಾನ ಹುದ್ದೆಗೂ ಅರ್ಜಿ ಹಾಕಿದ್ದ. ಆದರೆ, ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಸೇನೆಯಲ್ಲಿ ಸೈನಿಕನಾಗಲು ಕನಿಷ್ಠ 10ನೆ ತರಗತಿ ವ್ಯಾಸಂಗ ಮಾಡಿರಬೇಕು.
ಆದರೆ, ಜಿತೇಂದರ್ ಓದಿದ್ದು ಕೇವಲ 6ನೆ ತರಗತಿ ಮಾತ್ರ. ಹೀಗಾಗಿ ಸೇನೆಯಲ್ಲಿ ಖಾಲಿಯಿದ್ದ ಸಣ್ಣ-ಪುಟ್ಟ ಹುದ್ದೆಗಳಾದ ಬಾಣಸಿಗ, ದೋಬಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ವಿಫಲ ಯತ್ನ ನಡೆಸಿದ್ದನು. ಇಂತಹ ಹುದ್ದೆಗಳಿಗೆ ಯಾವುದೇ ರೀತಿಯ ಶಿಕ್ಷಣ ಬೇಕಾಗಿರಲಿಲ್ಲ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವೇಳೆ ಮಿಲಿಟರಿ ನೆಲೆಯ ಒಳಗಡೆ ಹೋಗುತ್ತಿದ್ದ. ಆಗ ಅಲ್ಲಿನ ಸೇನಾನೆಲೆಗಳ ಬಂಕರ್, ಮಿಲಿಟರಿ ವಾಹನಗಳು ಹಾಗೂ ಸುತ್ತಮುತ್ತಲಿರುವ ಪ್ರದೇಶಗಳನ್ನು ಯಾರಿಗೂ ತಿಳಿಯದಂತೆ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದ. ಅದೇ ಫೋಟೊಗಳನ್ನು ಐಎಸ್‍ಐ ಏಜೆಂಟ್‍ಗಳಿಗೆ ಕಳುಹಿಸುತ್ತಿದ್ದ ಎಂಬ ಆರೋಪ ಜೀತೆಂದರ್ ಮೇಲಿದೆ.







