ದ.ಕ.ಜಿಲ್ಲೆಯಲ್ಲಿ ಜು.19 - 21ರವರೆಗೆ ಯೆಲ್ಲೋ ಅಲರ್ಟ್

ಸಾಂದರ್ಭಿಕ ಚಿತ್ರ
ಮಂಗಳೂರು, ಜು.18: ನಗರ ಸಹಿತ ದ.ಕ.ಜಿಲ್ಲೆಯಲ್ಲಿ ಸೋಮವಾರ ಆರೆಂಜ್ ಅಲರ್ಟ್ ಇದ್ದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ನಗರದಲ್ಲಿ ಮೋಡ ಕವಿದ, ಬಿಸಿಲಿನ ವಾತಾವರಣದ ಮಧ್ಯೆ ಆಗಾಗ ಕೆಲಕಾಲ ಮಳೆಯಾಗಿದೆ.
ಪಶ್ಚಿಮ ಘಟ್ಟ ಪ್ರದೇಶ, ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಎಡೆಬಿಡದೆ ಮಳೆ ಸುರಿದ ಕಾರಣ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದ್ದು, ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ನದಿ ನೀರು ರಸ್ತೆಗೆ ಬಂದು ಕೆಲ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸುಳ್ಯ ತಾಲೂಕಿನ ಹಲವು ಕಡೆಗಳಲ್ಲೂ ಮಳೆ ಬಿರುಸು ಪಡೆದಿತ್ತು. ಪಣಂಬೂರು, ಉಳ್ಳಾಲ ಬಟಪಾಡಿಯಲ್ಲಿ ಕಡಲಬ್ಬರ ಮುಂದುವರಿದಿದೆ. ಪಣಂಬೂರು ಬೀಚ್ನಲ್ಲಿದ್ದ ವೀಕ್ಷಕ ಗೋಪುರವು ಸೋಮವಾರ ಸಮುದ್ರ ಪಾಲಾಗಿದೆ.
ಯೆಲ್ಲೋ ಅಲರ್ಟ್: ಭಾರತೀಯ ಹವಾಮಾನ ಇಲಾಖೆಯು ದ.ಕ.ಜಿಲ್ಲೆಯಲ್ಲಿ ಜು.19ರಿಂದ 21ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಆದಾಗ್ಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 28.70 ಮೀಟರ್, ಬಂಟ್ವಾಳನೇತ್ರಾವತಿ ನದಿ 6.9 ಮೀಟರ್, ಗುಂಡ್ಯ ಹೊಳೆಯಲ್ಲಿ 4.2 ಮೀಟರ್ ನೀರುಹರಿದಿದೆ.
ದ.ಕ. ಜಿಲ್ಲೆಯಲ್ಲಿ ಸೋಮವಾರ 4 ಮನೆ ಸಂಪೂರ್ಣ ಮತ್ತು 13 ಮನೆಗಳು ಭಾಗಶಃ ಹಾನಿಗೀಡಾಗಿವೆ. ಒಟ್ಟಾರೆ ಈವರೆಗೆ 94 ಮನೆಗಳು ಸಂಪೂರ್ಣ ಮತ್ತು 551 ಮನೆಗಳಿಗೆ ಭಾಗಶಃ ಹಾನಿಯಾಗಿವೆ.ಮೆಸ್ಕಾಂಗೆ ಸಂಬಂಧಿಸಿದಂತೆ 117 ವಿದ್ಯುತ್ ಕಂಬಗಳು, 3 ಟ್ರಾನ್ಸ್ ಫಾರ್ಮರ್ಗಳಿಗೆ ಹಾನಿಗೀಡಾಗಿವೆ. ಒಟ್ಟಿನಲ್ಲಿ ಈವರೆಗೆ 3,746 ವಿದ್ಯುತ್ ಕಂಬಗಳು ಮತ್ತು 239 ಟ್ರಾನ್ಸ್ಫಾರ್ಮರ್ಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
ದ.ಕ.ಜಿಲ್ಲೆಯ ಮಳೆ ವಿವರ
ಮಂಗಳೂರು: 39.5 ಮಿ.ಮೀ.
ಬಂಟ್ವಾಳ: 67.6 ಮಿ.ಮೀ.
ಪುತ್ತೂರು: 79.9 ಮಿ.ಮೀ.
ಬೆಳ್ತಂಗಡಿ: 79.1 ಮಿ.ಮೀ
ಸುಳ್ಯ: 68.1 ಮಿ.ಮೀ.
ಮೂಡುಬಿದಿರೆ: 81.7 ಮಿ.ಮೀ
ಕಡಬ: 103.0 ಮಿ.ಮೀ
(ಸರಾಸರಿ-75.0 ಮಿ.ಮೀ.)