ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಗೆ ವರ್ಗಾವಣೆ ಬೆದರಿಕೆ ಕೊಲಿಜಿಯಂ ಸ್ವಾತಂತ್ರದ ಬಗ್ಗೆ ಪ್ರಶ್ನೆ ಎತ್ತುತ್ತಿರುವುದೇಕೆ?

ಕರ್ನಾಟಕ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಬಿ)ದ ಮುಖ್ಯಸ್ಥ ಸೀಮಂತ ಕುಮಾರ ಸಿಂಗ್ ಅವರನ್ನೊಳಗೊಂಡ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ತಾನು ನಡೆಸುತ್ತಿರುವುದರಿಂದ ತನಗೆ ವರ್ಗಾವಣೆಯ ಬೆದರಿಕೆಯನ್ನು ಹಾಕಲಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎಚ್.ಪಿ.ಸಂದೇಶ ಅವರು ಜು.11ರ ತನ್ನ ಆದೇಶದಲ್ಲಿ ದಾಖಲಿಸಿದ್ದಾರೆ.
ಈ ಬಹಿರಂಗಪಡಿಸುವಿಕೆಯು ಕಾನೂನು ವ್ಯಾಖ್ಯಾನಕಾರರಿಗೆ ಆಘಾತವನ್ನುಂಟು ಮಾಡಿದೆ. ನ್ಯಾಯಾಧೀಶರೋರ್ವರು ವರ್ಗಾವಣೆ ಬೆದರಿಕೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿರುವುದು ಮಾತ್ರವಲ್ಲ,ಅದನ್ನು ಆದೇಶದಲ್ಲಿಯೂ ದಾಖಲಿಸಿರುವುದು ಅಪರೂಪದ ಘಟನೆಯಾಗಿದೆ.
ಇದು ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಯನ್ನು ಶಿಫಾರಸು ಮಾಡುವ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರ ಮಂಡಳಿಯಾದ ಕೊಲಿಜಿಯಮ್ನ ಸ್ವಾತಂತ್ರದ ಬಗ್ಗೆಯೂ ಪ್ರಶ್ನೆಗಳನ್ನೆತ್ತಿದೆ.
ನ್ಯಾಯಾಧೀಶರ ವರ್ಗಾವಣೆಗಳು ಹೆಚ್ಚುತ್ತಿರುವುದನ್ನು ಟೀಕಾಕಾರರು ಬೆಟ್ಟು ಮಾಡಿದ್ದು,ಚರ್ಚೆಯು ಪ್ರಾಮುಖ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ಕಾರ್ಯಾಂಗವು ನ್ಯಾಯಾಂಗ ನೇಮಕಾತಿಗಳಿಗಾಗಿ ಕೊಲಿಜಿಯಮ್ನ ಶಿಫಾರಸುಗಳನ್ನು ಕಡೆಗಣಿಸುವ ಮೂಲಕ ಕಾನೂನನ್ನು ಪಾಲಿಸುವಲ್ಲಿ ವಿಫಲಗೊಳ್ಳುತ್ತಿದೆ.
ಇದೆಲ್ಲ ಆರಂಭವಾಗಿದ್ದು ಹೇಗೆ?
ಐದು ಲ.ರೂ.ಗಳ ಲಂಚವನ್ನು ಪಡೆದ ಆರೋಪವನ್ನು ಎದುರಿಸುತ್ತಿರುವ ಉಪ ತಹಶೀಲ್ದಾರರ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾ.ಸಂದೇಶ್ ಅವರು ತನಿಖೆಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎಸಿಬಿ ಪರ ವಕೀಲರಿಗೆ ಸೂಚಿಸಿದ್ದರು. ಆದರೆ ಅವರು ಈ ಕೆಲಸವನ್ನು ಮಾಡಿರಲಿಲ್ಲ. ದಾಖಲೆಗಳನ್ನು ಸಲ್ಲಿಸಲು ವಿಫಲಗೊಳ್ಳುವ ಮೂಲಕ ಎಸಿಬಿ ಮತ್ತು ಅದರ ಮುಖ್ಯಸ್ಥ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರು ಉಪ ತಹಶೀಲ್ದಾರರನ್ನು ರಕ್ಷಿಸುತ್ತಿದ್ದಾರೆ ಎಂದು ಜೂ.29ರಂದು ನ್ಯಾ.ಸಂದೇಶ್ ಅಭಿಪ್ರಾಯಿಸಿದ್ದರು.
ನ್ಯಾಯಾಧೀಶರ ದಂಡನೀಯ ವರ್ಗಾವಣೆಯ ಬಗ್ಗೆ ತನಗೆ ತಿಳಿಸಿದ್ದ ಇನ್ನೊಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ತಾನು ಎಸಿಬಿ ಮತ್ತು ಸಿಂಗ್ ವಿರುದ್ಧ ತನಿಖೆಯನ್ನು ಮುಂದುವರಿಸಿದರೆ ತನಗೂ ಇದೇ ಗತಿಯಾಗಬಹುದು ಎಂಬ ಸುಳಿವನ್ನು ನೀಡಿದ್ದರು ಎಂದು ನ್ಯಾ.ಸಂದೇಶ ಅವರು ಜು.5ರಂದು ನ್ಯಾಯಾಲಯದಲ್ಲಿ ಹೇಳಿದ್ದರು.
ತಜ್ಞರಿಗೆ ಆಘಾತ
ಈ ಸರಣಿ ಘಟನೆಗಳ ಬಗ್ಗೆ ವಕೀಲರು ಮತ್ತು ಮಾಜಿ ನ್ಯಾಯಾಧೀಶರು ಆತಂಕ ವ್ಯಕ್ತಪಡಿಸಿದ್ದಾರೆ.
‘ನನ್ನ ಅಭಿಪ್ರಾಯದಲ್ಲಿ ಇದು ಅತ್ಯಂತ ಗಂಭೀರ ವಿಷಯವಾಗಿದೆ ಮತ್ತು ಈ ಬಗ್ಗೆ ಕೂಲಂಕಶ ಮತ್ತು ತ್ವರಿತ ವಿಚಾರಣೆ ನಡೆಯಬೇಕಿದೆ’ ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮದನ್ ಲೋಕೂರ್ ಹೇಳಿದರೆ,ತನ್ನ ಅಭಿಪ್ರಾಯದಲ್ಲಿ ಇನ್ನೋರ್ವ ಹಾಲಿ ನ್ಯಾಯಾಧೀಶರ ಮೂಲಕ ಇಂತಹ ಬೆದರಿಕೆಯನ್ನು ರವಾನಿಸಿರುವುದು ಹೆಚ್ಚು ಗಂಭೀರ ಸಮಸ್ಯೆಯಾಗಿದೆ. ಇದು ಹಾಲಿ ನ್ಯಾಯಾಧೀಶರು ಮತ್ತು ಬೆದರಿಕೆಯನ್ನು ಹಾಕಿರುವ ವ್ಯಕ್ತಿ (ಸೀಮಂತ ಕುಮಾರ ಸಿಂಗ್) ನಡುವೆ ಏನೋ ನೇರ ಸಂಬಂಧವಿದೆ ಎನ್ನುವುದನ್ನು ಸೂಚಿಸುತ್ತದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ಗೋವಿಂದ ಮಾಥುರ್ ಹೇಳಿದರು.
ಇಂತಹ ಸಾರ್ವಜನಿಕ ಪ್ರಕಟಣೆಯೂ ಅಪರೂಪವಾಗಿದೆ. ‘ಘಟನಾವಳಿಗಳು ನನಗೆ ಆಘಾತವನ್ನುಂಟು ಮಾಡಿವೆ. ಇಂತಹ ಸಂಭಾಷಣೆಗಳು,ಅವು ನಡೆದಿದ್ದರೆ,ಎಂದಿಗೂ ನ್ಯಾಯಾಂಗ ದಾಖಲೆಯಲ್ಲಿ ಕಾಣಿಸಿಕೊಂಡಿಲ್ಲ ’ಎಂದು ದಿಲ್ಲಿಯ ಹಿರಿಯ ನ್ಯಾಯವಾದಿ ಸಂಜಯ್ ಹೆಗ್ಡೆ ಹೇಳಿದರು.
ವರ್ಗಾವಣೆ ಪ್ರಕ್ರಿಯೆ
ಇಂತಹ ವರ್ಗಾವಣೆಗಳು ನ್ಯಾಯಾಂಗದ ಸ್ವಾತಂತ್ರವನ್ನು ಹೇಗೆ ದುರ್ಬಲಗೊಳಿಸುತ್ತವೆ ಎನ್ನುವುದನ್ನು ತಿಳಿದುಕೊಳ್ಳಲು ವರ್ಗಾವಣೆ ಪ್ರಕ್ರಿಯೆಯನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ.
ಉನ್ನತ ನ್ಯಾಯಾಂಗದಲ್ಲಿ ನೇಮಕಾತಿಗಳು ಮತ್ತು ವರ್ಗಾವಣೆಗಳನ್ನು ನಿಯಂತ್ರಿಸುವ ಮೆಮೊರಂಡಮ್ ಆಫ್ ಪ್ರೊಸೀಜರ್ (ಎಮ್ಒಪಿ) ಅಥವಾ ಕಾರ್ಯವಿಧಾನದ ಜ್ಞಾಪಕಪತ್ರದಂತೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ವರ್ಗಾವಣೆ ಪ್ರಕ್ರಿಯೆಯನ್ನು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ರು ಆರಂಭಿಸಬೇಕು. ಹಾಗೆ ಮಾಡುವಾಗ ಅವರು ಸರ್ವೋಚ್ಚ ನ್ಯಾಯಾಲಯದ ಇತರ ಹಲವಾರು ನ್ಯಾಯಾಧೀಶರು ಮತ್ತು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಅಭಿಪ್ರಾಯವನ್ನು ಪಡೆದುಕೊಳ್ಳಬೇಕಾಗುತ್ತದೆ.
ಈ ಅಭಿಪ್ರಾಯಗಳು ಲಿಖಿತ ರೂಪದಲ್ಲಿ ದಾಖಲಿಸಲ್ಪಡಬೇಕು ಮತ್ತು ಸಿಜೆಐ ಹಾಗೂ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಅತ್ಯಂತ ಹಿರಿಯ ನ್ಯಾಯಾಧೀಶರನ್ನೊಳಗೊಂಡ ಕೊಲಿಜಿಯಮ್ನಿಂದ ಅಂಗೀಕರಿಸಲ್ಪಡಬೇಕು. ಇದರ ನಂತರ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಕಾರ್ಯಾಂಗಕ್ಕೆ ಕಳುಹಿಸಲಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಪ್ರಮುಖ ಪಾತ್ರವನ್ನು ಹೊಂದಿದೆ ಮತ್ತು ಕಾರ್ಯಾಂಗವು ಅದರ ಶಿಫಾರಸುಗಳನ್ನು ಅನುಸರಿಸಬೇಕು. ಇದು ಸರಣಿ ತೀರ್ಪುಗಳ ಮೇಲೆ ಸ್ಥಾಪಿತ ಪದ್ಧತಿಯಾಗಿದೆ. ಈ ಹಿಂದೆ ನ್ಯಾಯಾಧೀಶರ ನೇಮಕಾತಿಯಲ್ಲಿ ಕಾರ್ಯಾಂಗವು ಪ್ರಾಮುಖ್ಯವನ್ನು ಹೊಂದಿತ್ತು,ಆದರೆ ನ್ಯಾಯಾಂಗವು ತನ್ನ ಸ್ವಾತಂತ್ರವನ್ನು ಕಾಯ್ದುಕೊಳ್ಳಲು ಪ್ರಕ್ರಿಯೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು.
ಕೊಲಿಜಿಯಂ ಮೇಲೆ ಹೆಚ್ಚುತ್ತಿರುವ ಪ್ರಭಾವ
ಪರಿಣಾಮವಾಗಿ ಕಾರ್ಯಾಂಗದ ವಿರುದ್ಧ ಕ್ರಮಕ್ಕಾಗಿ ನ್ಯಾಯಾಧೀಶರಿಗೆ ವರ್ಗಾವಣೆ ಬೆದರಿಕೆಗಳು ಈ ಪ್ರಕ್ರಿಯೆಯಲ್ಲಿ ಕೊಲಿಜಿಯಂ ಪಾತ್ರದ ಬಗ್ಗೆಯೂ ಪ್ರಶ್ನೆಗಳನ್ನೆತ್ತುತ್ತವೆ.
ವಕೀಲರು ಮತ್ತು ನ್ಯಾಯಾಧೀಶರು ವರ್ಗಾವಣೆ ಪ್ರಕ್ರಿಯೆ ಕುರಿತು ಅಚ್ಚರಿ ವ್ಯಕ್ತಪಡಿಸಿರುವುದಕ್ಕೆ ಕರ್ನಾಟಕದ ಘಟನೆ ಏಕೈಕ ನಿದರ್ಶನವಲ್ಲ. ಕಳೆದ ವರ್ಷ ಕೇಂದ್ರವನ್ನು ಹಲವಾರು ಸಲ ಟೀಕಿಸಿದ್ದಕ್ಕಾಗಿ ನ್ಯಾ.ಸಂಜೀವ್ ಬ್ಯಾನರ್ಜಿಯವರನ್ನು ಕೇವಲ 10 ತಿಂಗಳ ಅಧಿಕಾರಾವಧಿಯ ಬಳಿಕ ಮದ್ರಾಸ್ ಉಚ್ಚ ನ್ಯಾಯಾಲಯದಿಂದ ಮೇಘಾಲಯ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಇದು ‘ದೊಡ್ಡ ನ್ಯಾಯಾಲಯ’ದಿಂದ ‘ಸಣ್ಣ ನ್ಯಾಯಾಲಯ’ಕ್ಕೆ ದಂಡನೀಯ ವರ್ಗಾವಣೆ ಎಂದು ಹಲವರು ಪರಿಗಣಿಸಿದ್ದರು.
ಅಮಿತ್ ಶಾ ಅವರು ಗುಜರಾತಿನ ಗೃಹಸಚಿವರಾಗಿದ್ದಾಗ ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣದಲ್ಲಿ ಅವರನ್ನು ಸಿಬಿಐ ಕಸ್ಟಡಿಗೆ ಒಪ್ಪಿಸಿದ್ದ ನ್ಯಾ.ಅಕಿಲ್ ಕುರೇಶಿ ಅವರನ್ನೂ 2018ರಲ್ಲಿ ಅವರು ಮುಖ್ಯ ನ್ಯಾಯಾಧೀಶರಾಗಲಿದ್ದ ಗುಜರಾತ್ ಉಚ್ಚ ನ್ಯಾಯಾಲಯದಿಂದ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಅವರನ್ನು 2019ರಲ್ಲಿ ತ್ರಿಪುರಾ ಉಚ್ಚ ನ್ಯಾಯಾಲಯಕ್ಕೆ ಮತ್ತು ನಂತರ 2021ರಲ್ಲಿ ರಾಜಸ್ಥಾನ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
ದೇಶದ ಎರಡನೇ ಅತ್ಯಂತ ಹಿರಿಯ ಹೈಕೋರ್ಟ್ ನ್ಯಾಯಾಧೀಶರಾಗಿದ್ದರೂ ಕುರೇಶಿಯವರ ಹೆಸರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪದೋನ್ನತಿಗೂ ಕೊಲಿಜಿಯಂ ಶಿಫಾರಸು ಮಾಡಿರಲಿಲ್ಲ. ಈ ಶಿಫಾರಸಿನ ಕುರಿತು ಕಾರ್ಯಾಂಗವು ಕೊಲಿಜಿಯಂ ಮೇಲೆ ಪ್ರಭಾವವನ್ನು ಬೀರಿದೆಯೇ ಎಂದು ಹಲವಾರು ಕಾನೂನು ವ್ಯಾಖ್ಯಾನಕಾರರು ಪ್ರಶ್ನಿಸಿದ್ದರು.
ಕೊಲಿಜಿಯಮ್ನ ಪಾತ್ರವನ್ನು ಹೇಗೆ ದುರ್ಬಲಗೊಳಿಸಲಾಗುತ್ತಿದೆ ಎನ್ನುವುದನ್ನು ತೋರಿಸುತ್ತಿರುವುದು ವರ್ಗಾವಣೆಗಳ ಸಂಖ್ಯೆಯಲ್ಲಿನ ಹೆಚ್ಚಳವು ಏಕೈಕ ಪ್ರವೃತ್ತಿಯಲ್ಲ. ಕೊಲಿಜಿಯಂ ಕೆಲವು ಹೆಸರುಗಳನ್ನು ಪುನರುಚ್ಚರಿಸಿದ್ದರೂ ಹಲವಾರು ನ್ಯಾಯಾಂಗ ಶಿಫಾರಸುಗಳನ್ನು ಅನುಷ್ಠಾನಿಸುವಲ್ಲಿ ಕಾರ್ಯಾಂಗವು ವಿಫಲಗೊಂಡಿದೆ. ಇದು ಎಂಒಪಿಯನ್ನು ಉಲ್ಲಂಘಿಸುತ್ತದೆ.
ಕೇಂದ್ರವು ಶಿಫಾರಸುಗಳ ವಿಭಜನೆಯ ಕಾರ್ಯವನ್ನು ಹೆಚ್ಚಿಸತೊಡಗಿದೆ.ಅಂದರೆ ಅದು ಕೊಲಿಜಿಯಮ್ನ ಕೆಲವು ಶಿಫಾರಸುಗಳನ್ನು ಒಪ್ಪಿಕೊಳ್ಳುತ್ತಿದೆ ಮತ್ತು ಇತರ ಶಿಫಾರಸುಗಳನ್ನು ಕಡೆಗಣಿಸುತ್ತಿದೆ. ಈ ವಿಭಜನೆಯು 1986-87ರಲ್ಲಿ ಆರಂಭವಾಗಿತ್ತಾದರೂ ಅದು ಈಗ ತುಂಬ ಹೆಚ್ಚಾಗಿದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ದೀಪಕ ಗುಪ್ತಾ ಅವರು,ನೇಮಕಾತಿಗಳು ಮತ್ತು ವರ್ಗಾವಣೆಗಳಲ್ಲಿ ಮೇಲುಗೈ ಹೊಂದಿರಲು ಕಾರ್ಯಾಂಗವು ಬಯಸುತ್ತಿದೆ ಎಂದರು.
ಅಪಾರದರ್ಶಕ ಚೌಕಾಶಿ
ಇಂತಹ ನಿದರ್ಶನಗಳು ಕೊಲಿಜಿಯಂ ತನ್ನ ಉದ್ದೇಶಿತ ಪಾತ್ರವನ್ನು ನಿರ್ವಹಿಸುವಲ್ಲಿ ವಿಫಲಗೊಳ್ಳುತ್ತಿದೆಯೇ ಎಂದು ಕಾನೂನು ತಜ್ಞರು ಪ್ರಶ್ನಿಸುವಂತೆ ಮಾಡಿವೆ.
ಎಂಒಪಿ ಈಗ ಅಪ್ರಸ್ತುತವಾಗಿರುವುದರಿಂದ ಮತ್ತು ಕೊಲಿಜಿಯಂ ತನ್ನ ಅಪಾರದರ್ಶಕ ರೀತಿಯಲ್ಲಿ ಮುಂದುವರಿಯುತ್ತಿರುವುದರಿಂದ ನಾಮ ನಿರ್ದೇಶನಗಳು ನ್ಯಾಯಾಂಗದಿಂದ ಬರುತ್ತಿವೆಯೇ ಅಥವಾ ಕಾರ್ಯಾಂಗದಿಂದಲೇ ಎನ್ನುವುದನ್ನು ಹೇಳುವುದು ಸಾಧ್ಯವಿಲ್ಲ ಎಂದು ಹೇಳಿದ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯಲ್ಲಿ ಸೀನಿಯರ್ ರೆಸಿಡೆಂಟ್ ಫೆಲೋ ಆಗಿರುವ ಅಲೋಕ ಪ್ರಸನ್ನ ಅವರು,ಪ್ರಕ್ರಿಯೆಯು ಈಗ ನ್ಯಾಯಾಂಗ ನೇಮಕಾತಿಗಳು ನ್ಯಾಯಾಂಗ ಮತ್ತು ಕೇಂದ್ರ ಸರಕಾರದ ನಡುವಿನ ಅಪಾರದರ್ಶಕ ಚೌಕಾಶಿಯ ಫಲಿತಾಂಶವಾಗಿರುತ್ತಿದ್ದ ಕೊಲಿಜಿಯಮ್ಗೆ ಮೊದಲಿನ ವ್ಯವಸ್ಥೆಗೆ ಮರಳಿರುವಂತೆ ಕಂಡು ಬರುತ್ತಿದೆ ಎಂದು ಹೇಳಿದರು.
ನ್ಯಾ.ಗುಪ್ತಾ ಹೇಳುವಂತೆ,ಕೊಲಿಜಿಯಂ ತಾನು ಕಳುಹಿಸುವ ಶಿಫಾರಸುಗಳನ್ನು ಅವು ಹೇಗೆ ಇವೆಯೋ ಹಾಗೆಯೇ ಅಂಗಿಕರಿಸಬೇಕು ಎಂದು ಒತ್ತಾಯಿಸಬೇಕು. ಅವರು ದೃಢ ನಿಲುವನ್ನು ತಳೆಯದಿದ್ದರೆ ಅವರು ಹಸ್ತಕ್ಷೇಪಕ್ಕಾಗಿ ಸರಕಾರವನ್ನು ದೂರುವಂತಿಲ್ಲ ಎಂದು ನ್ಯಾ.ಗುಪ್ತಾ ಹೇಳಿದರು.
ಕೃಪೆ: Scroll.in







