ಶಿವಮೊಗ್ಗ | ರೌಡಿ ಶೀಟರ್ ಹತ್ಯೆಗೆ ಸಂಚು ಆರೋಪ: ಇಬ್ಬರ ಬಂಧನ

ವಿಘ್ನೇಶ್ | ಕಿರಣ್ ಕುಮಾರ್ -( ಬಂಧಿತ ಆರೋಪಿಗಳು)
ಶಿವಮೊಗ್ಗ, ಜು.18: ನಗರದಲ್ಲಿ ಮತ್ತೊಬ್ಬ ರೌ.ಡಿ ಶೀಟರ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಇಬ್ಬರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ
ವಿಘ್ನೇಶ್ ಮತ್ತು ಕಿರಣ್ ಕುಮಾರ್ ಬಂಧಿತರು ಎಂದು ತಿಳಿದು ಬಂದಿದೆ.
ರೌಡಿ ಶೀಟರ್ ಬಂಕ್ ಬಾಲು ಹತ್ಯೆ ಪ್ರಕರಣದಲ್ಲಿ ರೌಡಿ ಶೀಟರ್ ಅನಿಲ್ ಅಲಿಯಾಸ್ ಅಂಬು ಪ್ರಮುಖ ಪಾತ್ರ ವಹಿಸಿದ್ದ ಆರೋಪವಿದೆ. ಈ ಹಿನ್ನೆಲೆ ಅನಿಲ್ ನನ್ನು ಹತ್ಯೆ ಮಾಡಲು ಬಂಕ್ ಬಾಲು ಸಹಚರರು ಯೋಜನೆ ರೂಪಿಸಿದ್ದರು. ಬಂಕ್ ಬಾಲು ಸಹಚರರಾದ ವಿಘ್ನೇಶ್ ಮತ್ತು ಚಂದನ್ ಹತ್ಯೆಗೆ ಯೋಜನೆ ಸಿದ್ಧಪಡಿಸಿದ್ದರು ಎಂದು ಪೊಲೀಸ್ ಇಲಾಖೆ ಅಧಿಕೃತ ಮೂಲಗಳು ತಿಳಿಸಿವೆ.
ರೌಡಿ ಶೀಟರ್ ಅನಿಲ್ ನನ್ನು ಹತ್ಯೆ ಮಾಡಲು ವಿಘ್ನೇಶ್ ಮತ್ತು ಚಂದನ್ ಮಾರಕಾಸ್ತ್ರಗಳನ್ನು ಸಿದ್ಧಪಡಿಸಿಕೊಂಡಿದ್ದರು. ಆಯುಧಗಳನ್ನು ಖರೀದಿಸಿ ಕಿರಣ್ ಕುಮಾರ್ ಅಲಿಯಾಸ್ ಕುಟ್ಟಿ ಎಂಬಾತನ ಮನೆಯಲ್ಲಿ ಇಟ್ಟಿದ್ದರು. ಅಲ್ಲದೆ ಕಿರಣ,ಹಣ ಮತ್ತು ವಾಹನದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದ ಎಂದು ವಿಘ್ನೇಶ್ ಮತ್ತು ಚಂದನ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.
ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ವಿನೋಬನಗರ ಪೊಲೀಸ್ ಚೌಕಿಯಲ್ಲಿ ರೌಡಿ ಶೀಟರ್ ಅಣ್ಣಪ್ಪ ಅಲಿಯಾಸ್ ಹೊನ್ನಪ್ಪ ಅಲಿಯಾಸ್ ಹಂದಿ ಅಣ್ಣಿಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಂಧನಕ್ಕೆ ಪೊಲೀಸರು ನಾಲ್ಕು ತಂಡ ರಚನೆ ಮಾಡಿದ್ದರು. ಪ್ರಕರಣ ಸಂಬಂಧ ಕೆಲವರ ವಿಚಾರಣೆ ನಡೆಸಲಾಗುತ್ತಿತ್ತು. ಈ ವೇಳೆ ಅನಿಲ ಅಲಿಯಾಸ್ ಅಂಬು ಹತ್ಯೆ ಪ್ರಕರಣ ಬಯಲಾಗಿದೆ. ಬುದ್ಧಾನಗರದ ವಿಘ್ನೇಶ್(25) ಮತ್ತು ಓ.ಟಿ.ರಸ್ತೆಯ ಕಿರಣ್ ಕುಮಾರ್ ಎಂಬುವವರನ್ನು ಬಂಧಿಸಲಾಗಿದೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







