ಈಸ್ಟರ್ ಬಾಂಬ್ದಾಳಿ ಪ್ರಕರಣ ತನಿಖೆಗೆ ಬ್ರಿಟನ್ ನೆರವು ಕೋರಿದ ಶ್ರೀಲಂಕಾ
ಕೊಲಂಬೊ, ಜು.18: ಸುಮಾರು 270 ಮಂದಿಯ ಸಾವಿಗೆ ಕಾರಣವಾದ 2019ರ ಈಸ್ಟರ್ ಬಾಂಬ್ ದಾಳಿ ಪ್ರಕರಣದ ತನಿಖೆಗೆ ಬ್ರಿಟನ್ ಸರಕಾರ ಮತ್ತದರ ಗುಪ್ತಚರ ಸಂಸ್ಥೆಗಳ ನೆರವು ಕೋರುವುದಾಗಿ ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಸೋಮವಾರ ಹೇಳಿದ್ದಾರೆ.
ಐಸಿಸ್ ಜತೆ ಸಂಪರ್ಕ ಹೊಂದಿರುವ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ‘ನ್ಯಾಷನಲ್ ತೌಹೀದ್ ಜಮಾತ್’ (ಎನ್ಟಿಜೆಗೆ)ಗೆ ಸೇರಿದ 9 ಆತ್ಮಹತ್ಯಾ ಬಾಂಬರ್ಗಳು 2019ರ ಎಪ್ರಿಲ್ 21ರಂದು 3 ಕ್ಯಾಥೊಲಿಕ್ ಚರ್ಚ್ಗಳು ಹಾಗೂ 3 ಐಷಾರಾಮಿ ಹೋಟೆಲ್ಗಳಲ್ಲಿ ನಡೆಸಿದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 11 ಭಾರತೀಯರ ಸಹಿತ 270 ಮಂದಿ ಮೃತಪಟ್ಟಿದ್ದು 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ದಾಳಿಯ ಬಗ್ಗೆ ಮುನ್ಸೂಚನೆ ಇದ್ದರೂ ಆಗ ಅಧಿಕಾರದಲ್ಲಿದ್ದ ಮೈತ್ರಿಪಾಲ ಸಿರಿಸೇನ ಅಧ್ಯಕ್ಷತೆಯ ಮತ್ತು ರನಿಲ್ ವಿಕ್ರಮಸಿಂಘೆ ಪ್ರಧಾನಿಯಾಗಿದ್ದ ಸರಕಾರ ದಾಳಿಯನ್ನು ತಡೆಯಲು ಅಸಮರ್ಥವಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದ ತನಿಖೆಗೆ ರಚಿಸಲಾಗಿದ್ದ ಅಧ್ಯಕ್ಷರ ವಿಶೇಷ ಸಮಿತಿಯು ‘ಅಧ್ಯಕ್ಷ ಸಿರಿಸೇನ ಹಾಗೂ ಇತರ ಉನ್ನತ ಅಧಿಕಾರಿಗಳು ಗುಪ್ತಚರ ಮಾಹಿತಿ ಲಭ್ಯವಿದ್ದರೂ ಅದನ್ನು ಕಡೆಗಣಿಸಿದ್ದರಿಂದ ಅವರ ವಿರುದ್ಧ ಕ್ರಿಮಿನಲ್ ದಾವೆ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು’ ಶಿಫಾರಸು ಮಾಡಿತ್ತು.
ಈ ದುರಂತದ 3ನೇ ವಾರ್ಷಿಕ ದಿನವಾದ ಕಳೆದ ಎಪ್ರಿಲ್ 21ರಂದು ಹೇಳಿಕೆ ನೀಡಿದ್ದ ಆಗಿನ ಪ್ರಧಾನಿ ಮಹಿಂದಾ ರಾಜಪಕ್ಸ, ಬಾಂಬ್ಸ್ಫೋಟಕ್ಕೆ ಕಾರಣವಾದವರಿಗೆ ಸೂಕ್ತ ಶಿಕ್ಷೆ ವಿಧಿಸುವವರೆಗೆ ತಮ್ಮ ಸರಕಾರ ವಿರಮಿಸುವುದಿಲ್ಲ ಎಂದು ವಾಗ್ದಾನ ನೀಡಿದ್ದರು. ಆದರೆ ಮುಂದಿನ ತಿಂಗಳು ಅವರು ಜನಾಕ್ರೋಶಕ್ಕೆ ಮಣಿದು ರಾಜೀನಾಮೆ ನೀಡಬೇಕಾಗಿತ್ತು.
ಸೋಮವಾರ ವಿಶೇಷ ಹೇಳಿಕೆ ಬಿಡುಗಡೆಗೊಳಿಸಿರುವ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಈಸ್ಟರ್ ಸಂಡೆ ದುರಂತದ ಅಪೂರ್ಣ ತನಿಖೆಯ ಕಾರಣದಿಂದ ಈಗ ತನಿಖೆಗೆ ನೆರವಾಗಲು ಬ್ರಿಟನ್ ಸರಕಾರ ಮತ್ತು ಅಲ್ಲಿನ ಗುಪ್ತಚರ ಸಂಸ್ಥೆಯ ನೆರವು ಪಡೆಯುವುದಾಗಿ ಘೋಷಿಸಿದ್ದಾರೆ. ಕೊಲಂಬೋ ಚರ್ಚ್ನ ಆರ್ಚ್ಬಿಷಪ್ ಕಾರ್ಡಿನಲ್ ಮಾಲ್ಕಮ್ ರಂಜಿತ್ ನೇತೃತ್ವದಲ್ಲಿ ಬಾಂಬ್ ದಾಳಿ ಪ್ರಕರಣದ ಸಂತ್ರಸ್ತರ ಕುಟುಂಬದವರು ನಿಧಾನಗತಿಯ ತನಿಖೆಯ ಬಗ್ಗೆ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರು.